ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಹಿಂಸೆ ಖಂಡನೀಯ- ಇಸ್ಮಾಯಿಲ್ ಹಾಜಿ ಬೈತಡ್ಕ

ಪುತ್ತೂರು: ಶಿಕ್ಷಣ ಸಂಸ್ಥೆಗಳು ಸೌಹಾರ್ದಯುತವಾಗಿ ಮುನ್ನಡೆಯಬೇಕಾಗಿದ್ದು ವಿದ್ಯಾರ್ಥಿಗಳ ನಡುವೆ ಕೋಮು ಭಾವನೆಗಳು ಮೂಡಿಸುವ ಯಾವುದೇ ಪ್ರಯತ್ನಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಒಂದು ಸಮುದಾಯದ ವಿದ್ಯಾರ್ಥಿಗಳನ್ನು ಗುರಿ ಮಾಡಿ ಹಿಂಸೆ ನಡೆಸಲಾಗುತ್ತಿರುವುದು ಖಂಡನೀಯ. ಈ ಮೂಲಕ ಭಾತೃತ್ವಕ್ಕೆ ಹೆಸರಾಗಿರುವ ಪುತ್ತೂರಿನಲ್ಲಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ಸಂಚುಗಳನ್ನು ಕೆಲವು ಸಮಾಜ ದ್ರೋಹಿಗಳು ನಡೆಸುತ್ತಿರುವುದು ಖೇದಕರ ವಿಷಯವಾಗಿದೆ. ಈ ಬಗ್ಗೆ ಅಧಿಕಾರಿಗಳು ಮತ್ತು ಕಾನೂನು ಪಾಲಕರು ಎಚ್ಚೆತ್ತುಕೊಳ್ಳಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಬಿ.ಪಿ ಇಸ್ಮಾಯಿಲ್ ಹಾಜಿ ಬೈತಡ್ಕ ಹೇಳಿದರು.
ಅವರು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿಯ ವತಿಯಿಂದ ಸಮಿತಿಯ ಕಚೇರಿಯಲ್ಲಿ ಗುರುವಾರ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಕೋಮು ವಿಷ ಬೀಜವನ್ನು ಭಿತ್ತಿ ಸಮಾಜವನ್ನು ಒಡೆಯಲು ಯತ್ನಿಸಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪುತ್ತೂರು ಅಶಾಂತಿಯ ಮತ್ತು ಭಯಭೀತ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ. ದೈವ ಪವಿತ್ರತೆಯ ತ್ರಿಶೂಲವನ್ನು ಹಿಂಸಾತ್ಮಕ ಆಯುಧವನ್ನಾಗಿ ಪರಿವರ್ತಿಸಿ ಪವಿತ್ರತೆಯ ಸಂಕೇತವನ್ನೇ ಅಪವಿತ್ರಗೊಳಿಸಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ಸಂಶಯಾತ್ಮಕ ದೃಷ್ಟಿಯಲ್ಲಿ ನೋಡುವಂತೆ ಮಾಡುವ ಧರ್ಮ ದ್ರೋಹಿಗಳ ಕೃತ್ಯ ಖಂಡನೀಯವಾಗಿದೆ. ಕಾಲೇಜು ವಿದ್ಯಾರ್ಥಿಗಳ ನಡುವೆ ಸಮಸ್ಯೆ ತಲೆದೋರಿದರೆ ಅದರ ಮೂಲವನ್ನು ಅರಿತು ಸ್ಥಳೀಯವಾಗಿಯೇ ಬಗೆಹರಿಸಬೇಕು. ಆದರೆ ಕೊಂಬೆಟ್ಟು ಕಾಲೇಜಿನಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಗುರಿ ಮಾಡಿ ಹಿಂಸೆ ನಡೆಸಲಾಗಿದೆ. ಇಂತಹ ಮನಸ್ಥಿತಿ ಬದಲಾಗಬೇಕು ಎಂದರು.
ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿಯ ಪ್ರ.ಕಾರ್ಯದರ್ಶಿ ವಿ.ಎಚ್ ಅಬ್ದುಲ್ ಶಕೂರ್ ಹಾಜಿ ಮಾತನಾಡಿ ಕೊಂಬೆಟ್ಟು ಕಾಲೇಜಿನಲ್ಲಿ ನಡೆದ ಘಟನೆ ಮತ್ತು ಬಳಿಕದ ಬೆಳವಣಿಗೆ ನಿಯೋಜಿತ ಪಿತೂರಿಯಾಗಿದ್ದು ಹೆಣ್ಣು ಮಕ್ಕಳಲ್ಲಿ ಮಾತನಾಡಿದ ಕಾರಣಕ್ಕೆ ಗುರಿಯಾಗಿಸಿ ಹಿಂಸೆ, ಹಲ್ಲೆ ನಡೆಸುವುದರ ಮೂಲಕ ಹೆಣ್ಣು ಮಕ್ಕಳನ್ನೇ ಕೀಳಾಗಿ ಕಾಣುವ ಪ್ರವೃತ್ತಿ ಮಾಡಲಾಗುತ್ತಿದೆ. ಇಂತಹ ಘಟನೆಗಳಿಂದ ಇಲ್ಲಿನ ಸೌಹಾರ್ದತೆಯ ಬದುಕಿಗೆ ಧಕ್ಕೆಯಾಗುವುದರ ಜೊತೆಗೆ ವಿದ್ಯಾರ್ಥಿ ಗಳ ಬದುಕು ಹಾಳಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ಶಿಕ್ಷಣ ಸಂಸ್ಥೆಗಳು ಜಾತಿ ಧರ್ಮಗಳಿಗೆ ಅಸೀಮಿತವಾಗಿದೆ. ಇಲ್ಲಿನ ಸಮಸ್ಯೆಗಳನ್ನು ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಪಾರದರ್ಶಕವಾಗಿ ನೋಡಿ ಪರಿಹರಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸಮಸ್ಯೆಯಾದಲ್ಲಿ ಅವರ ಪೋಷಕರ ಗಮನಕ್ಕೆ ತಂದು ಅಥವಾ ಪೊಲೀಸರಿಗೆ ದೂರು ನೀಡಿ ಪರಿಹರಿಸಿಕೊಳ್ಳಬೇಕು ಅಲ್ಲದೇ ಪುಂಡ ಪೋಕರಿಗಳಿಗೆ ಶಿಕ್ಷಣ ಸಂಸ್ಥೆಗಳ ಆವರಣಕ್ಕೆ ಬಂದು ತಕರಾರು ನಡೆಸಲು ಅವಕಾಶ ನೀಡಬಾರದು. ಅಂತಹ ಪ್ರಕರಣಗಳು ನಡೆದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ಉಪಾಧ್ಯಕ್ಷ ಮುಹಮ್ಮದ್ ಮದನಿ, ಸವಣೂರು ವಲಯ ಅಧ್ಯಕ್ಷ ಟಾಸ್ಕೋ ಇಸ್ಮಾಯಿಲ್ ಹಾಜಿ, ವರ್ಕಿಂಗ್ ಸೆಕ್ರೇಟರಿ ರಶೀದ್ ಸಂಪ್ಯ, ತಾಲೂಕು ಸಮಿತಿ ಸದಸ್ಯ ಯೂಸುಫ್ ಬಾಯಂಬಾಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







