ಮಾರಾಟ ಮಾಡಲು ಮಾತ್ರ ವಿಮಾನ ನಿಲ್ದಾಣಗಳನ್ನು ಬಿಜೆಪಿ ನಿರ್ಮಿಸುತ್ತಿದೆ: ಅಖಿಲೇಶ್ ಯಾದವ್
‘ದಿಲ್ಲಿ ಏರ್ ಪೋರ್ಟ್ ನಷ್ಟದಲ್ಲಿರುವಾಗ ನೋಯ್ಡಾದಿಂದ ಯಾರಿಗೆ ಲಾಭ?’

ಲಕ್ನೊ: ದೇಶದಲ್ಲಿ ಅಸ್ತಿತ್ವದಲ್ಲಿರುವ ಇತರ ವಿಮಾನ ನಿಲ್ದಾಣಗಳನ್ನು ಮಾರಾಟ ಮಾಡುತ್ತಲೇ ಬಿಜೆಪಿ ನೋಯ್ಡಾ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಗುರುವಾರ ಟೀಕಿಸಿದ್ದಾರೆ.
ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಎಸ್‌ಪಿ ಮಿತ್ರಪಕ್ಷವಾದ ಜನವಾದಿ ಪಾರ್ಟಿ (ಸಮಾಜವಾದಿ) ಆಯೋಜಿಸಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, ಕೇಂದ್ರ ಸರಕಾರವು ಒಂದು ಕಡೆ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. ಮತ್ತೊಂದೆಡೆ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳನ್ನು ಮಾರಾಟ ಮಾಡುತ್ತಿದೆ. ಬಿಜೆಪಿಯನ್ನು ನಂಬುವುದು ಹೇಗೆ? ಎಂದು ಪ್ರಶ್ನಿಸಿದರು.
ಲಕ್ನೊ ವಿಮಾನ ನಿಲ್ದಾಣವನ್ನು ಈ ಹಿಂದೆಯೇ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.
ಗ್ರೇಟರ್ ನೋಯ್ಡಾದಲ್ಲಿ ಜೇವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ ದಿನದಂದು ಎಸ್‌ಪಿ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ.
"ಒಂದು ಸರಕಾರಿ ವಿಮಾನ ನಿಲ್ದಾಣವನ್ನು ಮಾರಾಟ ಮಾಡಲಾಗಿದೆ ಹಾಗೂ ಇನ್ನೊಂದನ್ನು ತಯಾರಿಸಲಾಗುತ್ತಿದೆ. ಕಾರಣವನ್ನು ಅರ್ಥಮಾಡಿಕೊಳ್ಳಲು ನಾನು ವಿಫಲವಾಗಿದ್ದೇನೆ. ಬಡವರು ಚಪ್ಪಲಿ ಹಿಡಿದು ವಿಮಾನದಲ್ಲಿ ಪ್ರಯಾಣಿಸುತ್ತಾರೆ ಎಂದು ಬಿಜೆಪಿ ಹೇಳಿದೆ. ಅವರಲ್ಲಿ ಎಷ್ಟು ಮಂದಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂಬುದನ್ನು ಬಡವರು ಬಿಜೆಪಿಗೆ ತಿಳಿಸಬೇಕು ಎಂದು ಅವರು ಹೇಳಿದರು.
ಬಿಜೆಪಿ ಸರಕಾರವು ವಿಮಾನ ನಿಲ್ದಾಣಗಳ ವಿಲೇವಾರಿಯಲ್ಲಿ ತೊಡಗಿದೆ ಎಂದ ಅವರು, ದಿಲ್ಲಿ ವಿಮಾನ ನಿಲ್ದಾಣವೂ ನಷ್ಟ ಅನುಭವಿಸುತ್ತಿರುವಾಗ ಈ ವಿಮಾನ ನಿಲ್ದಾಣಗಳಿಂದ ಯಾರು ಲಾಭ ಪಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡುವ ದೇಶದಲ್ಲಿ ಜನರ "ಹಕ್ಕು ಮತ್ತು ಗೌರವ" ಏನಾಗುತ್ತದೆ ಎಂದು ಅವರು ಕೇಳಿದರು.







