ಶ್ರೀನಗರ: ಎನ್ಕೌಂಟರ್ಗೆ ಮೂವರ ಬಲಿ
ಸತ್ತವರು ಉಗ್ರರೆಂದು ಪೊಲೀಸರ ಹೇಳಿಕೆ

ಸಾಂದರ್ಭಿಕ ಚಿತ್ರ
ಶ್ರೀನಗರ,ನ.25: ಶ್ರೀನಗರದ ಹೈದರ್ಪೋರದಲ್ಲಿ ಕನಿಷ್ಠ ಇಬ್ಬರು ನಾಗರಿಕರು ಕೊಲ್ಲಲ್ಪಟ್ಟಿದ್ದ ವಿವಾದಾತ್ಮಕ ‘ಗುಂಡಿನ ಕಾಳಗ’ದ 10 ದಿನಗಳ ಬಳಿಕ ಬುಧವಾರ ನಗರದ ರಾಮಬಾಗ್ನಲ್ಲಿ ಶೂಟೌಟ್ನಲ್ಲಿ ಮೂವರು ಉಗ್ರರನ್ನು ತಾವು ಕೊಂದಿರುವುದಾಗಿ ಜಮ್ಮು-ಕಾಶ್ಮೀರ ಪೊಲೀಸರು ಹೇಳಿದ್ದಾರೆ.
ಕೊಲ್ಲಲ್ಪಟ್ಟ ಉಗ್ರರಲ್ಲೋರ್ವ ಇತ್ತೀಚಿಗೆ ಶ್ರೀನಗರದಲ್ಲಿ ನಾಗರಿಕರ ಹತ್ಯೆಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾಮಬಾಗ್ನಲ್ಲಿ ಗುಂಡಿನ ಕಾಳಗದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರೆ,ಅವರನ್ನು ಕಾರಿನಿಂದ ಹೊರಗೆಳೆದು ಗುಂಡಿಕ್ಕಿಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಹತ್ಯೆಗಳು ಶ್ರೀನಗರದಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿದ್ದು,ಆಕ್ರೋಶಿತ ಜನರು ಘೋಷಣೆಗಳನ್ನು ಕೂಗಿದ ಮತ್ತು ಯುವಕರು ಕಲ್ಲುತೂರಾಟದಲ್ಲಿ ತೊಡಗಿದ್ದ ಘಟನೆಗಳು ನಡೆದಿವೆ. ರಾಮಬಾಗ್ ಪ್ರದೇಶದಲ್ಲಿ ಭಯೋತ್ಪಾದಕರ ಚಲನವಲನಗಳ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಶ್ರೀನಗರ ಪೊಲೀಸರ ಸಣ್ಣ ತಂಡವೊಂದು ಶಂಕಿತ ಸ್ಯಾಂಟ್ರೊ ಕಾರೊಂದನ್ನು ನಿಲ್ಲಿಸುವಂತೆ ಸೂಚನೆ ನೀಡಿತ್ತು. ಆದರೆ ಭಯೋತ್ಪಾದಕರು ಕಾರಿನೊಳಗಿನಿಂದ ಪೊಲೀಸರ ಮೇಲೆ ಗುಂಡುಗಳನ್ನು ಹಾರಿಸಿದ್ದರು ಮತ್ತು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದರು. ಪೊಲೀಸರು ಪ್ರತಿದಾಳಿ ನಡೆಸಿದಾಗ ಗುಂಡಿನ ಚಕಮಕಿ ನಡೆದಿತ್ತು ಎಂದು ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೃತರನ್ನು ಶ್ರೀನಗರದ ಮೆಹ್ರಾನ್ ಯಾಸೀನ್ ಶಲ್ಲಾ ಮತ್ತು ಮಂಜೂರ್ ಅಹ್ಮದ್ ಮಿರ್ ಹಾಗೂ ಫುಲ್ವಾಮಾ ಆರ್ಫಾತ್ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದ್ದು,ಲಷ್ಕರೆ ತೈಬಾದ ಛಾಯಾಗುಂಪು ರಸಿಸ್ಟನ್ಸ್ ಫ್ರಂಟ್ಗೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೆಹ್ರಾನ್ ಅ.7ರಂದು ಶ್ರೀನಗರದಲ್ಲಿ ಶಾಲಾ ಪ್ರಾಂಶುಪಾಲೆ ಮತ್ತು ಅವರ ಸಹೋದ್ಯೋಗಿಯ ಹತ್ಯೆಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.