ಮಂಗಳೂರು; ಬಾಲಕಿಯ ಅತ್ಯಾಚಾರ ಪ್ರಕರಣ: ನ.27ರಂದು ಶಿಕ್ಷೆಯ ಪ್ರಮಾಣ ಪ್ರಕಟ
ಆರೋಪ ಸಾಬೀತು

ಮಂಗಳೂರು, ನ. 25: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಎಸಗಿದ ಆರೋಪವು ಮಂಗಳೂರಿನ 1ನೇ ತ್ವರಿತಗತಿ ಸೆಷನ್ಸ್ ನ್ಯಾಯಾಲಯದಲ್ಲಿ ಗುರುವಾರ ಸಾಬೀತಾಗಿದೆ. ಆರೋಪಿಗೆ ಶಿಕ್ಷೆಯ ಪ್ರಮಾಣವನ್ನು ನ.27ರಂದು ನ್ಯಾಯಾಧೀಶರು ಪ್ರಕಟಿಸಲಿದ್ದಾರೆ.
ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ಕೇಪು ಗ್ರಾಮದ ನೀರ್ಕಜೆಯ ನಿತಿನ್ (27) ಎಂಬಾತ 2014 ರಲ್ಲಿ ವಿಟ್ಲ ಸಮೀಪದ 17 ವರ್ಷ ಪ್ರಾಯದ ದಲಿತ ಸಮುದಾಯದ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದ. ಆರೋಪಿ ನಿತಿನ್ ವೃತ್ತಿಯಲ್ಲಿ ಖಾಸಗಿ ಬಸ್ಸಿನ ಕಂಡೆಕ್ಟರ್ ಆಗಿದ್ದು, ಆತ ಕಾರ್ಯ ನಿರ್ವಹಿಸುತ್ತಿದ್ದ ಬಸ್‌ನಲ್ಲಿ ಬಾಲಕಿ ಕಾಲೇಜಿಗೆ ತೆರಳುತ್ತಿದ್ದಳು. ದ್ವಿತೀಯ ಪಿಯುಸಿ ಓದುತ್ತಿದ್ದ ಈ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿಯು 2014 ಜುಲೈ 24ರಂದು ಪುತ್ತೂರಿಗೆ ಬರುವಂತೆ ಹೇಳಿ ನಿನ್ನನ್ನೇ ಮದುವೆಯಾಗುವುದಾಗಿ ನಂಬಿಸಿ ರಾತ್ರಿ ವೇಳೆ ಸ್ಲೀಪರ್ ಬಸ್‌ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಬಸ್‌ನಲ್ಲಿ ಪ್ರಯಾಣಿಸುವ ಸಂದರ್ಭ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಬೆಂಗಳೂರಿಗೆ ತೆರಳಿದ ಬಳಿಕ ಅಲ್ಲಿ 2 ದಿನ ಸುತ್ತಾಡಿಸಿದ್ದ.
ತನ್ನಧ್ಯೆ ಕಾಲೇಜಿಗೆಂದು ಹೋಗಿದ್ದ ಮಗಳು ಮನೆಗೆ ವಾಪಸ್ ಬಾರದ ಕಾರಣ ಬಾಲಕಿಯ ಹೆತ್ತವರು ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಬಾಲಕಿ ನಿತಿನ್ ಜತೆಗೆ ಬೆಂಗಳೂರಿಗೆ ತೆರಳಿದ ಬಗ್ಗೆ ಸುಳಿವು ಲಭಿಸಿತ್ತು. ಹಾಗೇ ಪೊಲೀಸರು ಬೆಂಗಳೂರಿಗೆ ತೆರಳಿ ಜು.27ರಂದು ಪತ್ತೆ ಹಚ್ಚಿ ಊರಿಗೆ ಕರೆ ತಂದಿದ್ದರು.
ಬಾಲಕಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿದ ನಿತಿನ್ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿ ಬಳಿಕ ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ನಡೆಸಿದ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ತನಿಖೆಯನ್ನು ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಒಟ್ಟು 21 ಸಾಕ್ಷಿಗಳ ವಿಚಾರಣೆ ನಡೆಸಿದ್ದು, 24 ದಾಖಲೆಗಳನ್ನು ಗುರುತಿಸಲಾಗಿತ್ತು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ 1 ನೇ ತ್ವರಿತ ಗತಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಆರೋಪ ಸಾಬೀತಾಗಿದೆ ಎಂದು ತಿಳಿಸಿದರಲ್ಲದೆ ನ.27ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು. ಆರೋಪಿ ನಿತಿನ್ ಬಳಿ ಬಾಲಕಿಯನ್ನು ಬೆಂಗಳೂರಿಗೆ ಕರೆದೊಯ್ಯಲು ಹಣ ಇರಲಿಲ್ಲ. ಬಾಲಕಿಯ ಕಿವಿಯ ಚಿನ್ನಾಭರಣಗಳನ್ನು ಪಡೆದು ಅದನ್ನು ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಅಡವಿಟ್ಟು 2,850 ರೂ. ಪಡೆದು ಬೆಂಗಳೂರು ಪ್ರಯಾಣಕ್ಕೆ ಬಳಸಿಕೊಂಡಿದ್ದನು ಎಂದು ಮಾಹಿತಿ ನೀಡಿದ್ದಾರೆ.







