ನಾವು ಪ್ರತಿಪಕ್ಷಗಳ ಒಗ್ಗಟ್ಟನ್ನು ಬಯಸುತ್ತೇವೆ: ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲಿ: ಮೇಘಾಲಯದಲ್ಲಿ 17 ಶಾಸಕರ ಪೈಕಿ 12 ಮಂದಿ ತೃಣಮೂಲ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡ ಕಾರಣ ಆ ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷದ ಸ್ಥಾನವನ್ನು ಬಿಟ್ಟುಕೊಟ್ಟ ಒಂದು ದಿನದ ನಂತರ ಹೆಚ್ಚು ಕಂಗೆಟ್ಟಿರುವಂತೆ ಕಂಡುಬರದ ಕಾಂಗ್ರೆಸ್ ಗುರುವಾರ ದಿಲ್ಲಿಯಲ್ಲಿ ನಡೆದ ಕಾರ್ಯತಂತ್ರದ ಸಭೆಯಲ್ಲಿ ಆಡಳಿತಾರೂಢ ಬಿಜೆಪಿಯ ವಿರೋಧಿಗಳು ಏಕತೆಯನ್ನು ಎತ್ತಿಹಿಡಿಯುವ ಪ್ರತಿಜ್ಞೆ ಮಾಡಿತು ಎಂದು NDTV ವರದಿ ಮಾಡಿದೆ.
“ಸೋನಿಯಾ ಗಾಂಧಿ ನೇತೃತ್ವದಲ್ಲಿ ಮುಂಬರುವ ಸಂಸತ್ ಅಧಿವೇಶನದ ಕುರಿತು ಚರ್ಚೆ ನಡೆಸಿದ್ದೇವೆ. ಸಂಸತ್ತಿನಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಬೇಕಾಗಿದೆ. 29 ರಂದು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಹಾಗೂ ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುತ್ತೇವೆ" ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
"ನಾವು ಹಣದುಬ್ಬರ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಹಾಗೂ ಚೀನಾ ಅತಿಕ್ರಮಣ ಕುರಿತ ವಿಚಾರ ಎತ್ತುತ್ತೇವೆ. ಈ ಎಲ್ಲಾ ವಿಷಯಗಳ ಬಗ್ಗೆ ನಾವು ಚರ್ಚೆಯನ್ನು ಬಯಸುತ್ತೇವೆ. ತೃಣಮೂಲ ಹಾಗೂ ಇತರರೊಂದಿಗೆ ಸಂಘಟಿತ ವಿಧಾನವನ್ನು ಹೊಂದಲು ನಾವು ಇತರ ಎಲ್ಲ ಪಕ್ಷಗಳೊಂದಿಗೆ ಸಮನ್ವಯ ಸಾಧಿಸುತ್ತೇವೆ. ನಾವು ಪ್ರತಿಪಕ್ಷಗಳ ಒಗ್ಗಟ್ಟನ್ನು ಬಯಸುತ್ತೇವೆ’’ ಎಂದು ಖರ್ಗೆ ಹೇಳಿದರು.
ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಹಾಗೂ ಇತರ 11 ಕಾಂಗ್ರೆಸ್ ಶಾಸಕರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲಕ್ಕೆ ಸೇರಿದ್ದಾರೆ. ಕಾಂಗ್ರೆಸ್ ಈಶಾನ್ಯ ರಾಜ್ಯದಲ್ಲಿ ಭಾರೀ ಹೊಡೆದ ಅನುಭವಿಸಿದ ಮರುದಿನವೇ ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರ ಪಠಿಸಿದೆ.