ಡಿ.12ಕ್ಕೆ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ: ಕಣದಲ್ಲಿ 141 ಅಭ್ಯರ್ಥಿಗಳು

ಬೆಂಗಳೂರು, ನ.25: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಚುನಾವಣೆಯನ್ನು ಡಿ.12ರ ಭಾನುವಾರ ಪೂರ್ವಾಹ್ನ 7 ರಿಂದ ಸಂಜೆ 5 ಗಂಟೆಯವರೆಗೆ ಜಿಲ್ಲಾ ಕ್ಷೇತ್ರ ಚುನಾವಣಾಧಿಕಾರಿಗಳು ನಿಗದಿಪಡಿಸಿದ ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಒಕ್ಕಲಿಗರ ಸಂಘ(ರಿ)ದ ಚುನಾವಣಾಧಿಕಾರಿ ಪಿ.ಎನ್. ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಲ್ಲಿಕೆಯಾದ 152 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, 4 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತಗೊಂಡಿವೆ. 11 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದು, ಅಂತಿಮವಾಗಿ 141 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿರುತ್ತಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಕನ್ನಡ ವರ್ಣಮಾಲೆಯ ಅನುಸಾರ ಜೋಡಿಸಿ ಕ್ರಮಸಂಖ್ಯೆಗಳನ್ನು ನೀಡಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ತಮಿಳುನಾಡಿನ ಹೊಸೂರು ಸೇರಿದಂತೆ ಬೆಂಗಳೂರು ನಗರ ಜಿಲ್ಲೆಯಲ್ಲ್ಲಿ 1,19,937, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲ್ಲಿ 34,334 ಮತ್ತು ರಾಮನಗರ ಜಿಲ್ಲೆಯಲ್ಲಿ 42,892, ಸೇರಿದಂತೆ ಒಟ್ಟು 1,97,163 ಮತದಾರರಿದ್ದು, 500 ಮತದಾರರಿಗೆ ಒಂದು ಮತಗಟ್ಟೆಯಂತೆ ಪೋಸ್ಟಲ್ ಪಿನ್ ಕೋಡ್ ಆಧಾರದ ಮೇಲೆ ಬೆಂಗಳೂರು ನಗರದಲ್ಲಿ 23 ಮತದಾನ ಕೇಂದ್ರಗಳಲ್ಲಿ 238 ಮತಗಟ್ಟೆಗಳನ್ನು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ಮತದಾನ ಕೇಂದ್ರಗಳಲ್ಲಿ 68 ಮತಗಟ್ಟೆಗಳನ್ನು ಹಾಗೂ ರಾಮನಗರ ಜಿಲ್ಲೆಯಲ್ಲಿ 4 ಮತದಾನ ಕೇಂದ್ರಗಳಲ್ಲಿ 84 ಮತಗಟ್ಟೆಗಳನ್ನು ರಚಿಸಲಾಗಿದೆ. ಮತ ಎಣಿಕೆ ಡಿ.15 ನಡೆಯಲಿದ್ದು, ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದೆ.







