ಭೀಮಾ ಕೋರೆಗಾಂವ್ ಪ್ರಕರಣ: ಸಾಮಾಜಿಕ ಹೋರಾಟಗಾರ ಮಹೇಶ್ ರಾವತ್‌ಗೆ ಜಾಮೀನು ನಿರಾಕರಣೆ

ಹೊಸದಿಲ್ಲಿ, ನ. 25: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಅರಣ್ಯ ಹಕ್ಕುಗಳ ಹೋರಾಟಗಾರ ಮಹೇಶ್‌ರಾವತ್ ಅವರಿಗೆ ವಿಶೇಷ ಎನ್‌ಐಎ ನ್ಯಾಯಾಲಯ ಗುರುವಾರ ಜಾಮೀನು ನೀಡಲು ನಿರಾಕರಿಸಿದೆ. ನಿಷೇಧಿತ ನಕ್ಸಲೀಯರ ಗುಂಪುಗಳು 2017 ಡಿಸೆಂಬರ್ 31ರಂದು ಪುಣೆಯಲ್ಲಿ ಎಲ್ಗಾರ್ ಪರಿಷತ್ ಸಮಾವೇಶ ಆಯೋಜಿಸಿದ್ದರು ಎಂದು ಆರೋಪಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಮಾಡಿದ ಭಾಷಣಗಳು ಮರು ದಿನ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಹಿಂಸಾಚಾರ ನಡೆಯಲು ಕಾರಣವಾಯಿತು ಎಂದು ಪೊಲೀಸರು ಆರೋಪಿಸಿದ್ದರು.
ಮಾವೋವಾದಿ ಸಿದ್ಧಾಂತ ಪ್ರಸಾರ ಮಾಡಿದ ಹಾಗೂ ಅಕ್ರಮ ಚಟುವಟಿಕೆಗಳಿಗೆ ಉತ್ತೇಜನ ನೀಡಿದ ಆರೋಪಕ್ಕೆ ರಾವತ್ ಒಳಗಾಗಿದ್ದಾರೆ. ನಿಷೇಧಿತ ನಕ್ಸಲೀಯ ಸಂಘಟನೆಗಳಿಗೆ ರಾವತ್ ಅವರು ಹಣಕಾಸಿನ ನೆರವು ನೀಡಿದ್ದಾರೆ ಎಂದು ಕೂಡ ಎನ್‌ಐಎ ಆರೋಪಿಸಿದೆ. ಪರಾರಿಯಾಗಿ ಭೂಗತನಾಗಿದ್ದ ಮಾವೋವಾದಿ ನಾಯಕನನ್ನು ಭೇಟಿ ಮಾಡಿಸಲು ಟಾಟಾ ಇನ್‌ಸ್ಟಿಟ್ಯೂಟ್‌ನ ಸಾಮಾಜಿಕ ವಿಜ್ಞಾನದ ವಿದ್ಯಾರ್ಥಿಗಳನ್ನು 2017ರಲ್ಲಿ ಕರೆದೊಯ್ದ ಆರೋಪ ಕೂಡ ರಾವತ್ ಅವರು ಮೇಲಿದೆ ಎಂದು ಪ್ರಕರಣವನ್ನು ಆರಂಭದಲ್ಲಿ ತನಿಖೆ ನಡೆಸಿದ ಪುಣೆ ಪೊಲೀಸರು ತಿಳಿಸಿದ್ದಾರೆ.
ರಾವತ್ ಅವರು ಟಾಟಾ ಇನ್‌ಸ್ಟಿಟ್ಯೂಟ್‌ನ ಇಬ್ಬರು ಮಾಜಿ ವಿದ್ಯಾರ್ಥಿಗಳನ್ನು ಮಾವೋವಾದಿ ಸಂಘಟನೆಗೆ ನಿಯೋಜಿಸಿದ್ದರು. ಅಲ್ಲದೆ ಅವರಿಗೆ ಶಸ್ತ್ರಾಸ್ತ್ರ ತರಬೇತು ನೀಡಲಾಗಿದೆ ಎಂದು ಎನ್‌ಐಎ ಹೇಳಿದೆ. ಜಾಮೀನು ವಿಚಾರಣೆಯ ವೇಳೆ ರಾವತ್ ಅವರ ವಕೀಲ ವಿಜಯ್ ಹಿರೇಮಠ್, ಆರೋಪಗಳನ್ನು ಸಾಬೀತುಪಡಿಸಲು ಎನ್‌ಐಎ ವಿಫಲವಾಗಿದೆ ಎಂದು ಹೇಳಿದರು. ಮಾವೋವಾದಿಗಳಿಗೆ ಹಣಕಾಸಿನ ನೆರವು ನೀಡಿರುವುದರ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಹಿರೇಮಠ್ ತಿಳಿಸಿದ್ದಾರೆ. ಇದಲ್ಲದೆ ನಕ್ಸಲೀಯ ಸಂಘಟನೆಗೆ ರಾವತ್ ನೇಮಕಾತಿ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಯಾವುದೇ ಅಂಶವನ್ನು ಆರೋಪ ಪಟ್ಟಿ ಒಳಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.