ಪೂರ್ವ ಭಾರತ, ಬಾಂಗ್ಲಾದೇಶದಲ್ಲಿ ಭೂಕಂಪ

ಢಾಕಾ: ಬಾಂಗ್ಲಾದೇಶದಲ್ಲಿ ಮುಂಜಾನೆ ಭೀಕರ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟಿತ್ತು.
ಮುಂಜಾನೆ 5.15ರ ವೇಳೆಗೆ ಚಿತ್ತಗಾಂಗ್‌ನಿಂದ 175 ಕಿಲೋಮೀಟರ್ ಪೂರ್ವದಲ್ಲಿ ಮ್ಯಾನ್ಮಾರ್- ಭಾರತ ಗಡಿ ಸಮೀಪ ಈ ಭೂಕಂಪ ಸಂಭವಿಸಿದೆ ಎಂದು ಯೂರೋಪಿಯನ್- ಮೆಡಿಟರೇನಿಯನ್ ಸಿಸ್ಮೋಲಾಜಿಕಲ್ ಸೆಂಟರ್ (ಇಎಂಎಸ್‌ಸಿ) ಪ್ರಕಟಿಸಿದೆ.
ಶುಕ್ರವಾರ ನಸುಕಿನಲ್ಲಿ ಮ್ಯಾನ್ಮಾರ್- ಭಾರತ ಗಡಿಯಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ 6.1ರಷ್ಟಿತ್ತು ಎಂದು ಭಾರತದ ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ.
ಚಿತ್ತಗಾಂಗ್‌ನಲ್ಲಿ ಮಾತ್ರವಲ್ಲದೇ ಪೂರ್ವ ಭಾರತದ ಕೊಲ್ಕತ್ತಾದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಇಎಂಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಟ್ವಿಟ್ಟರ್ ಬಳಕೆದಾರರು ಕೂಡಾ ಭೂಕಂಪನದ ಅನುಭವ ಹಂಚಿಕೊಂಡಿದ್ದಾರೆ.
ಈ ಭೂಕಂಪದ ಕೇಂದ್ರ ಬಿಂದು ಈಶಾನ್ಯ ಭಾರತದ ಐಜ್ವಾಲ್‌ನಿಂದ 125 ಕಿಲೋಮೀಟರ್ ಆಗ್ನೇಯಕ್ಕೆ ಇತ್ತು ಎಂದು ರಾಯ್ಟರ್ಸ್ ವರದಿ ಮಾಡಿದೆ.
ಪೂರ್ವ ಭಾರತದ ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಅಸ್ಸಾಂನಲ್ಲಿ ಕೂಡಾ ಭೂಕಂಪದ ಅನುಭವ ಆಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕೊಲ್ಕತ್ತಾ ಮತ್ತು ಗುವಾಹತಿಯಲ್ಲಿ ಸುಮಾರು 30 ಸೆಕೆಂಡುಗಳಷ್ಟು ಸುಧೀರ್ಘ ಅವಧಿಗೆ ಭೂಮಿ ಕಂಪಿಸಿದೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಇಎಂಎಸ್‌ಸಿ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.