ಕುಟುಂಬ ರಾಜಕಾರಣ ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಪ್ರಧಾನಿ ಮೋದಿ

ಹೊಸದಿಲ್ಲಿ: ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಂವಿಧಾನ ದಿನ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಿಡಿಕಾರಿದ್ದಾರೆ.
ಒಂದು ಕುಟುಂಬದಿಂದ ತಲೆಮಾರುಗಳವರೆಗೆ ಪಕ್ಷವನ್ನು ನಡೆಸಿದರೆ ಅದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ದೊಡ್ಡ ಸಮಸ್ಯೆಯಾಗಿದೆ. ಕುಟುಂಬ ರಾಜಕಾರಣ ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಇವು ಕುಟುಂಬದಿಂದ ಕುಟುಂಬಕ್ಕಾಗಿ ಇರುವ ಪಕ್ಷಗಳು ಎಂದರು.
"ರಾಜಕೀಯ ಪಕ್ಷಗಳು ತಮ್ಮಲ್ಲಿರುವ ಪ್ರಜಾಸತ್ತಾತ್ಮಕ ಗುಣವನ್ನು ಕಳೆದುಕೊಂಡಾಗ ಸಂವಿಧಾನದ ಆತ್ಮಕ್ಕೂ ಘಾಸಿಯಾಗಿದೆ. ಸಂವಿಧಾನದ ಪ್ರತಿಯೊಂದು ವಿಭಾಗವೂ ಘಾಸಿಗೊಂಡಿದೆ. ಪ್ರಜಾಸತ್ತಾತ್ಮಕ ಗುಣವನ್ನು ಕಳೆದುಕೊಂಡಿರುವ ಪಕ್ಷಗಳು ಪ್ರಜಾಪ್ರಭುತ್ವವನ್ನು ಹೇಗೆ ರಕ್ಷಿಸುತ್ತವೆ?" ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.
"ಸಂವಿಧಾನದ ದಿನವು ಈ ಸದನಕ್ಕೆ ವಂದಿಸುವ ದಿನವಾಗಿದೆ. ನಾವು ಮಹಾತ್ಮ ಗಾಂಧಿ ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹೋರಾಡಿದ ಎಲ್ಲರಿಗೂ ನಾವು ಗೌರವ ಸಲ್ಲಿಸುತ್ತೇವೆ. ನಮ್ಮ ಸಂವಿಧಾನವು ನಮ್ಮ ವೈವಿಧ್ಯಮಯ ದೇಶವನ್ನು ಬಂಧಿಸುತ್ತದೆ. ಸಂವಿಧಾನವನ್ನು ಅನೇಕ ಅಡೆತಡೆಗಳ ನಂತರ ರಚಿಸಲಾಗಿದೆ ಹಾಗೂ ದೇಶದಲ್ಲಿ ರಾಜಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸಲಾಗಿದೆ" ಎಂದು ಅವರು ಹೇಳಿದರು.