ಆಹಾರ ಪದ್ಧತಿ-ಧರ್ಮದ ಆಯ್ಕೆ ಸಂವಿಧಾನ ನೀಡಿರುವ ಹಕ್ಕು: ಬಿ.ಚನ್ನಕೃಷ್ಣಪ್ಪ

ಬೆಂಗಳೂರು, ನ.26: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ತನಗೆ ಬೇಕಾದ ಆಹಾರ ಪದ್ಧತಿ, ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ನೀಡಲಾಗಿದೆ. ಆದರೆ, ಇಂದು ಸಂವಿಧಾನ ವಿರೋಧಿಗಳು ಆಹಾರ ಹಾಗೂ ಧರ್ಮದ ಹೆಸರಿನಲ್ಲಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕರ್ನಾಟಕ ಸಮತಾ ಸೈನಿಕ ದಳ(ಕೆಎಸ್‍ಎಸ್‍ಡಿ)ದ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ಕಿಡಿಗಾರಿದರು.
ಶುಕ್ರವಾರ ನಗರದ ಹಳೆ ಮದ್ರಾಸ್ ರಸ್ತೆಯಲ್ಲಿರುವ ಪೈ ಲೇಔಟ್(ಟಿನ್ ಫ್ಯಾಕ್ಟರಿ ಸಮೀಪ)ನಲ್ಲಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟವು ಆಯೋಜಿಸಿದ್ದ ‘ಸಂವಿಧಾನ ಸಮರ್ಪಣಾ ದಿನಾಚರಣೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಹಾರ ಪದ್ಧತಿ, ಧರ್ಮದ ಆಯ್ಕೆ, ಬದುಕುವ ಹಕ್ಕು ಸಂವಿಧಾನಬದ್ಧವಾಗಿ ಎಲ್ಲರಿಗೂ ನೀಡಲಾಗಿದೆ. ಇವುಗಳನ್ನು ಮುಂದಿಟ್ಟುಕೊಂಡು ಶೋಷಿತರ ಮೇಲೆ ನಡೆಯುವಂತಹ ದಬ್ಬಾಳಿಕೆಯನ್ನು ಪ್ರಜ್ಞಾವಂತ ನಾಗರಿಕರು ವಿರೋಧಿಸಬೇಕು. ಆಗ ಮಾತ್ರ ಸಂವಿಧಾನದ ಉಳಿವು ಸಾಧ್ಯ ಎಂದು ಎಂದು ಅವರು ಹೇಳಿದರು.
ಸಂವಿಧಾನವನ್ನು ಒಪ್ಪದವರು, ಜಾತಿ ವ್ಯವಸ್ಥೆಯನ್ನು ಪೋಷಿಸುವವರು, ಸಮಾನತೆಯನ್ನು ವಿರೋಧಿಸುವವರು ಇವತ್ತು ನಮ್ಮನ್ನು ಆಳುತ್ತಿದ್ದಾರೆ. ಆರೆಸ್ಸೆಸ್, ಬ್ರಾಹ್ಮಣಶಾಹಿಯನ್ನು ವಿರೋಧಿಸಿದರೆ ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ. ಸಂಗೀತ ನಿರ್ದೇಶಕ ಹಂಸಲೇಖ ವಿಚಾರದಲ್ಲಿಯೂ ಇದೇ ರೀತಿಯ ಬೆಳವಣಿಗೆಗಳು ಆಗಿರುವುದು ಎಂದು ಚನ್ನಕೃಷ್ಣಪ್ಪ ಹೇಳಿದರು.
ಬ್ರಿಟಿಷರಂತೆ ಹೊರಗಡೆಯಿಂದ ಬಂದಿರುವ ಈ ಆರ್ಯರನ್ನು ದೇಶ ಬಿಟ್ಟು ಓಡಿಸುವ ಚಳವಳಿ ಆರಂಭಿಸಬೇಕು. ಆಗ ಮಾತ್ರ ಈ ದೇಶದಲ್ಲಿ ಮೂಲನಿವಾಸಿಗಳು ಗೌರವಯುತ ಬದುಕು ಸಾಗಿಸಲು ಸಾಧ್ಯ. ಅಂಬೇಡ್ಕರ್ ನೀಡಿರುವ ಸಂವಿಧಾನ ಯಥಾವತ್ತಾಗಿ ಜಾರಿ ಮಾಡಿದರೆ, ಎಲ್ಲರಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ಸಿಗುತ್ತದೆ ಎಂದು ಅವರು ಹೇಳಿದರು.
ಕೆಪಿಸಿಸಿ ಎಸ್ಸಿ ಘಟಕದ ಉಪಾಧ್ಯಕ್ಷ ನಲ್ಲೂರಹಳ್ಳಿ ನಾಗೇಶ್ ಮಾತನಾಡಿ, 1949ರ ನ.26ರಂದು ಸಲ್ಲಿಕೆಯಾದ ಸಂವಿಧಾನದ ಬಗ್ಗೆ ಸಂಸತ್ತಿನಲ್ಲಿ ಸುದೀರ್ಘವಾಗಿ ಎರಡು ತಿಂಗಳು ಚರ್ಚೆ ನಡೆದ ಬಳಿಕ ದೇಶವು 1950ರ ಜ.26ರಂದು ಸಂವಿಧಾನವನ್ನ ಒಪ್ಪಿಕೊಂಡಿತು. ಈ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಪ್ರಾಮಾಣಿಕವಾಗಿ ಮಾಡಿದೆ ಎಂದರು.
ಅಂಬೇಡ್ಕರ್ ಅವರು ಅಸ್ಪೃಶ್ಯ ಜನಾಂಗದಲ್ಲಿ ಜನಿಸದೆ ಇದ್ದಿದ್ದರೆ, ಸುಮಾರು 2500 ವರ್ಷಗಳಿಂದ ದಾಸ್ಯದ ಸಂಕೋಲೆಯಲ್ಲಿ ಸಿಲುಕಿ ನರಳುತ್ತಿದ್ದ ನಮ್ಮ ಸಮುದಾಯವನ್ನು ಹೊರಗೆ ತರಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಅಂಬೇಡ್ಕರ್ ತಮ್ಮ ಶಿಕ್ಷಣದ ಶಕ್ತಿಯನ್ನು ಶೋಷಿತರ ಕಲ್ಯಾಣಕ್ಕೆ ಬಳಸಿದರು ಎಂದು ಅವರು ಹೇಳಿದರು.
ದೇಶದಲ್ಲಿನ ಮೂರೂವರೆ ಕೋಟಿ ದೇವಾನುದೇವತೆಗಳಿಂದ ನಮಗೆ ಮುಕ್ತಿ ಸಿಕ್ಕಿಲ್ಲ. ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನಾವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಯಿತು. ಆದುದರಿಂದ, ಅಂಬೇಡ್ಕರ್ ನೀಡಿರುವ ‘ಶಿಕ್ಷಣ, ಸಂಘಟನೆ ಹಾಗೂ ಹೋರಾಟ’ ಎಂಬ ಮಂತ್ರವನ್ನು ನಾವು ಸದಾ ಪಾಲಿಸಬೇಕು ಎಂದು ನಲ್ಲೂರಹಳ್ಳಿ ನಾಗೇಶ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ರಾಜ್ ಗಿರಿ, ಉಪಾಧ್ಯಕ್ಷ ಎಂ.ಕೃಷ್ಣಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಕಮಲಮ್ಮ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.







