ದೇಶದಲ್ಲಿ ಮಕ್ಕಳು, ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಏರಿಕೆ: ಸಮೀಕ್ಷೆ ವರದಿ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದ ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿದೆ ಎಂದು ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ ತಿಳಿಸಿದೆ. ಐದು ವರ್ಷಗಳ ಹಿಂದೆ, 2016ರಲ್ಲಿ 6ರಿಂದ 59 ತಿಂಗಳು ಪ್ರಾಯದ ಶೇ 58.6ರಷ್ಟು ಮಕ್ಕಳಲ್ಲಿ ಈ ಸಮಸ್ಯೆಯಿದ್ದರೆ ಈ ಪ್ರಮಾಣ 2021ರಲ್ಲಿ ಶೇ 67.1ಗೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯೊಂದರಲ್ಲಿಯೇ ಶೇ 69.2ರಷ್ಟು ಮಕ್ಕಳು ಹಾಗೂ ಶೇ 49.4ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.
ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿದೆ 2016ರಲ್ಲಿ ಈ ಪ್ರಮಾಣ ಶೇ 35.7 ಆಗಿದ್ದರೆ 2021ರಲ್ಲಿ ಶೇ 68.4 ಆಗಿದೆ. ಎರಡನೇ ಸ್ಥಾನದಲ್ಲಿ ಮಿಝೋರಾಂ ಇದ್ದು ಈ ಸಮಸ್ಯೆ ಎದುರಿಸುತ್ತಿರುವ ಮಕ್ಕಳ ಪ್ರಮಾಣದಲ್ಲಿ 2016-2021 ಅವಧಿಯಲ್ಲಿ ಶೇ 27.3ರಷ್ಟು ಏರಿಕೆಯಾಗಿದೆ. ಉಳಿದಂತೆ ಛತ್ತೀಸಗಢ (ಶೇ 25.6 ಏರಿಕೆ), ಒಡಿಶಾ (ಶೇ 19.6), ಪುದುಚ್ಚೇರಿ (ಶೇ 19.1), ಮಣಿಪುರ ಮತ್ತು ಜಮ್ಮು ಕಾಶ್ಮೀರ (18.9) ಇವೆ.
ಮೂರನೇ ಒಂದಂಶದಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ (ಶೇ 79.7), ರಾಜಸ್ಥಾನ (ಶೇ 71.5), ಪಂಜಾಬ್ (ಶೇ 71.1), ಹರ್ಯಾಣ (ಶೇ 70.4). ತೆಲಂಗಾಣ (ಶೇ 70), ಬಿಹಾರ (ಶೇ 69.4), ಅಸ್ಸಾಂ (ಶೇ 68.4). ಪ ಬಂಗಾಳ (ಶೇ 69), ಮಹಾರಾಷ್ಟ್ರ (ಶೇ 68.9), ಉತ್ತರ ಪ್ರದೇಶ (ಶೇ 66.4) ಇವೆ.
ಕೇಂದ್ರಾಡಳಿತ ಪ್ರದೇಶಗಳ ಪೈಕಿ ಲಡಾಖ್ನಲ್ಲಿ ಶೇ 92.5ರಷ್ಟು ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಸಮೀಕ್ಷೆ ನಡೆಸಲಾದ ಮಹಿಳೆಯರ ಪೈಕಿ ಶೇ 57ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. 2016 ಹಾಗೂ 2021ರ ನಡುವೆ 23 ರಾಜ್ಯಗಳಲ್ಲಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಏರಿಕೆಯಾಗಿದೆ ಹಾಗೂ ಈ ಅವಧಿಯಲ್ಲಿ ಗರಿಷ್ಠ ಪ್ರಮಾಣದ ಏರಿಕೆ ಕಂಡ ರಾಜ್ಯ ಅಸ್ಸಾಂ ಆಗಿದೆ. ಉಳಿದಂತೆ ಲಡಾಖ್ನಲ್ಲಿ ಶೇ 92.8ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಪಶ್ಚಿಮ ಬಂಗಾಳ(ಶೇ 71.4), ತ್ರಿಪುರಾ (67.2). ಅಸ್ಸಾಂ (65.9), ಜಮ್ಮು ಕಾಶ್ಮೀರ (65.9), ಜಾರ್ಖಂಡ್ (65.3), ಗುಜರಾತ್ (65), ಒಡಿಶಾ (64.3) ಹಾಗೂ ಬಿಹಾರ (63.5)ದಲ್ಲಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಅಧಿಕವಾಗಿದೆ.