ರೈಲಿಗೆ ಬೆಂಕಿ ಹಚ್ಚಿದ್ದರಲ್ಲಿ ಹಿಂದುತ್ವ ಗುಂಪುಗಳ ಕೈವಾಡವಿತ್ತೆನ್ನುವುದು ಅಸಂಬದ್ಧ: ಸಿಟ್ ಹೇಳಿಕೆ
►ಗುಜರಾತ್ ಹತ್ಯಾಕಾಂಡದ ಕುರಿತು ಝಾಕಿಯಾ ಜಾಫ್ರಿ ಅರ್ಜಿ

ಝಾಕಿಯಾ ಜಾಫ್ರಿ (File Photo: PTI)
ಹೊಸದಿಲ್ಲಿ, ನ.26: 2002ರಲ್ಲಿ ಸಂಭವಿಸಿದ್ದ ಗುಜರಾತ್ ಹತ್ಯಾಕಾಂಡದ ಕುರಿತು ತನಿಖೆಯನ್ನು ನಡೆಸಿರುವ ಸರ್ವೋಚ್ಚ ನ್ಯಾಯಾಲಯದಿಂದ ನೇಮಕಗೊಂಡ ವಿಶೇಷ ತನಿಖಾ ತಂಡ (ಸಿಟ್)ವು,ಸಾಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದರಲ್ಲಿ ಹಿಂದುತ್ವ ಗುಂಪುಗಳ ಕೈವಾಡವಿತ್ತು ಎನ್ನುವ ವಾದ ಅಸಂಬದ್ಧವಾಗಿದೆ ಎಂದು ಬಣ್ಣಿಸಿದೆ ಎಂದು indianexpress.com ವರದಿ ಮಾಡಿದೆ.
“ಫೆ.27ರಂದು ರೈಲಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಅದಕ್ಕೂ ಮೊದಲೇ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಇದು ನನ್ನನ್ನು ಬೆಚ್ಚಿಬೀಳಿಸಿದೆ. ನಾನೋರ್ವ ವಿಹಿಂಪನ ಮೂಲಭೂತವಾದಿ ಹಿಂದು ಸದಸ್ಯ ಎಂದಿಟ್ಟುಕೊಳ್ಳಿ ಮತ್ತು ರೈಲು ದಹನ ಘಟನೆಯ ದಿನಾಂಕ ಗೊತ್ತಿಲ್ಲದೆ ಫೆ.25ರಂದೇ ನಾನು ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿಕೊಂಡಿದ್ದೆ ಎನ್ನುವುದು ಅರ್ಥಹೀನ” ಎಂದು ಸಿಟ್ ಪರ ಹಿರಿಯ ವಕೀಲ ಮುಕುಲ ರೋಹಟ್ಗಿ ಅವರು ಗುರುವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ನ್ಯಾ.ಎ.ಎಂ.ಖನ್ವಿಲ್ಕರ್ ನೇತೃತ್ವದ ಪೀಠಕ್ಕೆ ತಿಳಿಸಿದರು.
ರೈಲು ದಹನವು ಹಿಂದುತ್ವ ಗುಂಪುಗಳ ಕೈವಾಡವಾಗಿತ್ತು ಎನ್ನುವುದು ನಿಜವಲ್ಲ, ಏಕೆಂದರೆ ರೈಲು ಐದು ಗಂಟೆಗಳಷ್ಟು ವಿಳಂಬವಾಗಿ ಗೋಧ್ರಾ ನಿಲ್ದಾಣಕ್ಕೆ ಆಗಮಿಸಿತ್ತು ಮತ್ತು ಅಲ್ಲಿ ಕೇವಲ ಎರಡು ನಿಮಿಷ ನಿಲ್ಲಲಿತ್ತು ಎಂದ ರೋಹಟ್ಗಿ, ಅವರಿಗೆ ತಿಳಿದಿರಲಿಕ್ಕಿಲ್ಲ. ಇದೆಲ್ಲ ಅಸಂಬಂದ್ಧ. ಇಲ್ಲಿ ಹೇಳಲಾಗುತ್ತಿರುವುದಕ್ಕೂ ಒಂದು ಮಿತಿಯಿದೆ ಎಂದರು.
ದಂಗೆಗಳ ಸಂದರ್ಭ ಗುಲ್ಬರ್ಗ್ ಹೌಸಿಂಗ್ ಸೊಸೈಟಿ ನರಮೇಧದಲ್ಲಿ ಕೊಲ್ಲಲ್ಪಟ್ಟ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಾಕಿಯಾ ಜಾಫ್ರಿ ಅವರು ದಂಗೆ ಸಂಬಂಧಿತ ಪ್ರಕರಣಗಳಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ 63 ಜನರಿಗೆ ಕ್ಲೀನ್ ಚಿಟ್ ನೀಡಿರುವ ಸಿಟ್ ನ ಸಮಾಪನ ವರದಿಯನ್ನು ಒಪ್ಪಿಕೊಳ್ಳುವ ಅಹ್ಮದಾಬಾದ್ ಮಹಾನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ಧಾರವನ್ನು ಎತ್ತಿ ಹಿಡಿದಿರುವ ಗುಜರಾತ್ ಉಚ್ಚ ನ್ಯಾಯಾಲಯದ 2017, ಅ.5ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.