ಹೊಸ ವೈರಸ್ ಪ್ರಬೇಧದ ಭೀತಿ : ಸೆನ್ಸೆಕ್ಸ್ ಮಹಾಪತನ

ಮುಂಬೈ: ಹಾಲಿ ಇರುವ ಲಸಿಕೆಗಳಿಗೆ ಪ್ರತಿರೋಧ ಶಕ್ತಿ ಬೆಳೆಸಿಕೊಂಡಿರುವ ಕೋವಿಡ್-19 ವೈರಸ್‌ನ ಹೊಸ ರೂಪಾಂತರ ಮೊದಲ ಬಾರಿಗೆ ಬೋತ್ಸುವಾನಾದಲ್ಲಿ ಪತ್ತೆಯಾಗಿದ್ದು, ಜಾಗತಿಕ ಹೂಡಿಕೆದಾರರನ್ನು ಕಂಗೆಡಿಸಿದೆ. ಇದರ ಪರಿಣಾಮವಾಗಿ ಅಪಾಯ ಸಾಧ್ಯತೆಯ ಆಸ್ತಿಗಳನ್ನು ಮಾರಾಟ ಮಾಡುವ ಪ್ರವೃತ್ತಿ ಜಾಗತಿಕ ಮಾರುಕಟ್ಟೆಯಲ್ಲಿ ಕಂಡುಬಂದಿದೆ.
ದಲಾಲ್ ಸ್ಟ್ರೀಟ್ ಹೂಡಿಕೆದಾರರು ಕೂಡಾ ಅಪಾಯದ ಕರೆಗಂಟೆ ಒತ್ತಿದ್ದು, ಸೆನ್ಸೆಕ್ಸ್ 1688 ಅಂಕಗಳಷ್ಟು ಕುಸಿಯಲು ಇದು ಕಾರಣವಾಗಿದೆ.
ಕಳೆದ ಏಳು ತಿಂಗಳ ಅವಧಿಯಲ್ಲಿ ಒಂದೇ ಬಾರಿ ಸಂಭವಿಸಿದ ಅತಿದೊಡ್ಡ ಕುಸಿತ ಇದಾಗಿದ್ದು, 57107 ಅಂಕಗಳೊಂದಿಗೆ ಮುಕ್ತಾಯವಾಗಿದೆ. ಒಮ್ಮೆ ಅಲ್ಪಾವಧಿಗೆ 57 ಸಾವಿರದ ಮಟ್ಟಕ್ಕೂ ಕುಸಿದಿತ್ತು. ಮೂರು ತಿಂಗಳಲ್ಲಿ ಈ ಮಟ್ಟಕ್ಕೆ ಕುಸಿದಿರುವುದು ಇದೇ ಮೊದಲು.
ಶುಕ್ರವಾರ ಷೇರು ಪೇಟೆ ಸೂಚ್ಯಂಕ 2.9% ಕುಸಿದಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದಿರುವ ದುರ್ಬಲ ವಾತಾವರಣ ಇದಕ್ಕೆ ಮುಖ್ಯ ಕಾರಣ. ಕಳೆದ ಕೆಲ ದಿನಗಲಲ್ಲಿ, ವಿಶ್ವದ ಅತಿದೊಡ್ಡ ಆರ್ಥಿಕತೆ ಎನಿಸಿದ ಅಮೆರಿಕದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ 30 ವರ್ಷದಲ್ಳೇ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಅಮೆರಿಕ ಘೋಷಿಸಿದ ಬೆನ್ನಲ್ಲೇ ಜಾಗತಿಕವಾಗಿ ಹೊಸ ಆತಂಕ ಕವಿದಿದೆ. ಇದು ಅಮೆರಿಕದ ಫೆಡರಲ್ ರಿಸರ್ವ್ ಬಗ್ಗೆ, ಸೆಂಟ್ರಲ್ ಬ್ಯಾಂಕ್ ಬಗ್ಗೆ ಹೂಡಿಕೆದಾರರಲ್ಲಿ ಅನುಮಾನಕ್ಕೆ ಕಾರಣವಾಗಿದ್ದು, 2022ರ ಆರಂಭದಲ್ಲಿ ದರ ಹೆಚ್ಚಿಸುವ ನಿರೀಕ್ಷೆ ಇದೆ. ವರ್ಷದ ಉತ್ತರಾರ್ಧಕ್ಕಿಂತ ಮುನ್ನವೇ ಈ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ.
ಭಾರತದಲ್ಲಿ ಕೂಡಾ ಸಗಟು ಹಣದುಬ್ಬರ ಸತತ ಏಳು ತಿಂಗಳುಗಳಿಂದ ಎರಡಂಕಿಯಲ್ಲೇ ಇರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ಕಾದು ನೋಡುತ್ತಿದ್ದಾರೆ. ಕಚ್ಚಾ ತೈಲದ ದರ ಹೆಚ್ಚಳ ಕೂಡಾ ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ.
ಶುಕ್ರವಾರ ಭಾರತೀಯ ಷೇರುಪೇಟೆಯ ಬೆಳವಣಿಗೆಗಳು ಇತರ ಏಷ್ಯನ್ ಮಾರುಕಟ್ಟೆಗಳ ನಡೆಗಳ ಜತೆ ಸಮನ್ವಯ ಹೊಂದಿದ್ದು, ಯೂರೋಪ್‌ನಲ್ಲಿ ಕೂಡಾ ಇದೇ ಪ್ರವೃತ್ತಿ ಕಂಡುಬಂದಿದೆ ಎಂದು ಎಮ್ಕೆ ವೆಲ್ತ್ ಮ್ಯಾನೇಜ್‌ಮೆಂಟ್‌ನ ಮುಖ್ಯ ಸಂಶೋಧಕ ಜೋಸೆಫ್ ಥಾಮಸ್ ವಿಶ್ಲೇಷಿಸಿದ್ದಾರೆ.