ಭಾರತದಲ್ಲಿ 21ನೇ ಶತಮಾನದಲ್ಲೂ ಜಾತಿ ಆಧರಿತ ತಾರತಮ್ಯ ಅಸ್ತಿತ್ವದಲ್ಲಿದೆ: ಮಾಜಿ ಸ್ಪೀಕರ್ ಮೀರಾ ಕುಮಾರ್
"ದೇಶದಲ್ಲಿ ಎರಡು ರೀತಿಯ ಹಿಂದೂಗಳಿದ್ದಾರೆ - ದೇವಸ್ಥಾನ ಪ್ರವೇಶಿಸುವವರು, ಪ್ರವೇಶ ಇಲ್ಲದವರು"

ಮಾಜಿ ಸ್ಪೀಕರ್ ಮೀರಾ ಕುಮಾರ್ (File Photo: PTI)
ಹೊಸದಿಲ್ಲಿ: ಭಾರತದಲ್ಲಿ 21ನೇ ಶತಮಾನದಲ್ಲೂ ಜಾತಿ ಆಧರಿತ ತಾರತಮ್ಯ ಅಸ್ತಿತ್ವದಲ್ಲಿದೆ ಎಂದು ತಮ್ಮ ಅಸಮಾಧಾನ ತೋಡಿಕೊಂಡಿರುವ ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್, ದೇಶದಲ್ಲಿ ಎರಡು ರೀತಿಯ ಹಿಂದುಗಳಿದ್ದಾರೆ, ದೇವಸ್ಥಾನಗಳಿಗೆ ಪ್ರವೇಶಿಸಬಹುದಾದವರು ಹಾಗೂ ಪ್ರವೇಶಿಸಲು ಸಾಧ್ಯವಿಲ್ಲದವರು ಎಂದು ಅವರು ಹೇಳಿದ್ದಾರೆ.
ಸಮಾರಂಭವೊಂದರ ಅಧ್ಯಕ್ಷತೆ ವಹಿಸಿ ಮಾತನಾಡಿದ, ಅವರು ತಮ್ಮ ತಂದೆ ಬಾಬು ಜಗಜೀವನ್ ರಾಮ್ ಅವರಿಗೂ ಹಲವು ಜನರು 'ಹಿಂದು ಧರ್ಮ ತೊರೆಯಲು' ಹೇಳಿದ್ದರು, ಅವರು ಜಾತಿ ಆಧರಿತ ತಾರತಮ್ಯ ಎದುರಿಸುತ್ತಿದ್ದುದರಿಂದ ಹೀಗೆ ಹೇಳಲಾಗಿತ್ತು. ಆದರೆ ''ನನ್ನ ತಂದೆ ಹಾಗೆ ಮಾಡುವುದಿಲ್ಲ, ಬದಲು ತಮ್ಮ ಪ್ರಸಕ್ತ ಹುದ್ದೆ ಬಳಸಿ ವ್ಯವಸ್ಥೆಯ ವಿರುದ್ಧ ಹೋರಾಡುವುದಾಗಿ ಹೇಳಿದ್ದರು,'' ಎಂದು ಮೀರಾ ಕುಮಾರ್ ಹೇಳಿದರು.
"ಧರ್ಮ ಬದಲಾಯಿಸುವುದರಿಂದ ಜಾತಿ ಬದಲಾಗುತ್ತದೆಯೇ?" ಎಂದು ತಂದೆ ಕೇಳುತ್ತಿದ್ದರು ಎಂದು ಅವರು ಹೇಳಿದರು.
"ನಾವು 21ನೇ ಶತಮಾನದಲ್ಲಿ ಜೀವಿಸುತ್ತಿದ್ದೇವೆ, ಮಿರುಗುವ ರಸ್ತೆಗಳನ್ನು ಹೊಂದಿದ್ದೇವೆ. ಆದರೆ ಈ ರಸ್ತೆಗಳಲ್ಲಿ ಸಂಚರಿಸುವ ಹಲವರು ಈಗಲೂ ಜಾತಿ ವ್ಯವಸ್ಥೆಯಿಂದ ಬಾಧಿತರಾಗಿದ್ದಾರೆ. ನಮ್ಮ ಮನಸ್ಸುಗಳು ಯಾವಾಗ ಮಿರುಗಲಿವೆ, ಜಾತಿ ಆಧರಿತ ಭಾವನೆಗಳನ್ನು ಯಾವಾಗ ಓಡಿಸಲಿದ್ದೇವೆ?'' ಎಂದು ಅವರು ಪ್ರಶ್ನಿಸಿದರು.
"ಅರ್ಚಕರು ಅನೇಕ ಬಾರಿ ನನ್ನ 'ಗೋತ್ರ' ಕೇಳಿದ್ದಾರೆ. ಆಗ ನಾನು ಜಾತೀಯತೆಯನ್ನು ತಿರಸ್ಕರಿಸಿದ ಗುಂಪಿನಿಂದ ನಾನು ಬಂದವಳು ಎಂದು ಹೇಳುತ್ತೇನೆ. ನಾವು ಎಲ್ಲಾ ಸಂಸ್ಕೃತಿಗಳನ್ನು ಮೈಗೂಡಿಕೊಂಡವರು ಎಂದು ನಾನು ನಂಬಿದ್ದೇನೆ. ವಿವಿಧ ಧರ್ಮಗಳಲ್ಲಿನ ಅತ್ಯುತ್ತಮವಾದುದನ್ನು ನಾವು ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಿದ್ದೇವೆ. ಅದು ನಮ್ಮ ಪಾರಂಪರಿಕತೆ,'' ಎಂದು ಮೀರಾ ಕುಮಾರ್ ಹೇಳಿದರು.
ರಾಜಧಾನಿಯ ರಾಜೇಂದ್ರ ಭವನ್ನಲ್ಲಿ, ರಾಜ್ಯಸಭಾ ಸದಸ್ಯ ಕಾಂಗ್ರೆಸ್ ಪಕ್ಷದ ಜೈರಾಂ ರಮೇಶ್ ಅವರು ತಮ್ಮ ನೂತನ ಕೃತಿ "ದಿ ಲೈಟ್ ಆಫ್ ಏಷ್ಯಾ: ದಿ ಪೋಯಂ ದ್ಯಾಟ್ ಡಿಫೈನ್ಡ್ ಬುದ್ಧ'' ಇದರ ಬಗ್ಗೆ ಮಾತನಾಡಿದ ನಂತರ ಮೀರಾ ಕುಮಾರ್ ತಮ್ಮ ಭಾಷಣ ನೀಡಿದ್ದರು.