ಕಾನ್ಪುರ್ ಟೆಸ್ಟ್ ವೇಳೆ 'ಗುಟ್ಕಾ ಮ್ಯಾನ್' ಎಂದೇ ವೈರಲ್ ಆದ ವ್ಯಕ್ತಿ ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ...

Photo: Twitter/@TheSatyaShow
ಹೊಸದಿಲ್ಲಿ: ಕಾನ್ಪುರ್ನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಗುರುವಾರ ಭಾರತ-ನ್ಯೂಝಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬ 'ತಂಬಾಕು' ಜಗಿಯುತ್ತಾ ಫೋನ್ನಲ್ಲಿ ಮಾತನಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿತ್ತು.
ಈ ವ್ಯಕ್ತಿ ಶೋಭಿತ್ ಪಾಂಡೆ ಕಾನ್ಪುರ್ನ ಮಹೇಶ್ವರಿ ಮಹೊಲ್ ನಿವಾಸಿಯಾಗಿದ್ದು 'ಗುಟ್ಕಾ ಮ್ಯಾನ್' ಎಂದೇ ಜನಪ್ರಿಯನಾಗಿದ್ದಾನೆ. ಈತ ಪಂದ್ಯ ವೀಕ್ಷಿಸಲು ಆಗಮಿಸಿದ್ದನಲ್ಲದೆ ಜತೆಗೆ "ತಂಬಾಕು ಜಗಿಯುವುದು ಕೆಟ್ಟ ಅಭ್ಯಾಸ'' ಎಂದು ಹಿಂದಿಯಲ್ಲಿ ಬರೆದಿದ್ದ ಪೋಸ್ಟರ್ ಅನ್ನೂ ಕೈಯ್ಯಲ್ಲಿ ಹಿಡಿದುಕೊಂಡಿದ್ದ ಎನ್ನಲಾಗಿದೆ.
ಆತನ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಆತನ ಕುರಿತು ಹಲವಾರು ಮೀಮ್ಗಳೂ ಹರಿದಾಡಿದವು ಹಾಗೂ ಅನೇಕರು ಆತನನ್ನು ಟ್ರೋಲ್ ಮಾಡಿದ್ದರು.
ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿ ನಂತರ ಸ್ಪಷ್ಟೀಕರಣ ನೀಡಿದ ಆತ "ನಾನು ತಂಬಾಕು ಜಗಿಯುತ್ತಿರಲಿಲ್ಲ. ನಾನು ಎಲೆಯಡಿಕೆ ಜಗಿಯುತ್ತಿರುವಾಗ ಫೋನ್ನಲ್ಲಿ ಸ್ನೇಹಿತನ ಜತೆ ಮಾತನಾಡುತ್ತಿದ್ದೆ, ಆತ ಕೂಡ ಅದೇ ಸ್ಟೇಡಿಯಂನಲ್ಲಿ ಪಂದ್ಯವನ್ನು ಬೇರೊಂದು ಸ್ಟ್ಯಾಂಡ್ನಲ್ಲಿ ವೀಕ್ಷಿಸುತ್ತಿದ್ದ,'' ಎಂದು ಹೇಳಿದ್ದಾರೆ.
"ನಾನು ಕೇವಲ 10 ಸೆಕೆಂಡ್ ಮಾತನಾಡಿದ್ದೆ ಹಾಗೂ ಆ ವೀಡಿಯೋ ವೈರಲ್ ಆಯಿತು, ನಾನು ಮಾತನಾಡುತ್ತಿದ್ದ ಸ್ನೇಹಿತನೇ ಈ ಸುದ್ದಿ ನನಗೆ ತಿಳಿಸಿದ್ದ. ಆದರೆ ಆ ವೀಡಿಯೋದಲ್ಲಿ ಪಕ್ಕದಲ್ಲಿ ತನ್ನ ಸೋದರಿಯೂ ಕುಳಿತಿರುವುದು ಕಾಣಿಸುತ್ತಿದ್ದುದರಿಂದ ಆಕೆ ಕೂಡ ಕೆಲ ಕೆಟ್ಟ ಕಾಮೆಂಟ್ಗಳನ್ನು ಎದುರಿಸಿದ್ದಾಳೆ. ನಾನೇನೂ ತಪ್ಪು ಮಾಡಿಲ್ಲ, ನನಗೆ ಭಯ ಅಥವಾ ಮುಜುಗರವಿಲ್ಲ ಆದರೆ ನನ್ನ ತಂಗಿ ಬಗ್ಗೆ ಕಾಮೆಂಟ್ಗಳು ನನಗೆ ಇಷ್ಟವಾಗಿಲ್ಲ. ಜತೆಗೆ ಮಾಧ್ಯಮಗಳಿಂದಲೂ ನನಗೆ ಹಲವಾರು ಕರೆಗಳು ಬರುತ್ತಿವೆ ಹಾಗೂ ಇದು ನನಗೆ ಸಾಕಾಗಿದೆ,'' ಎಂದು ಅವರು ಹೇಳಿದ್ದಾರೆ.