ಸೋಮವಾರ ವಿರೋಧ ಪಕ್ಷಗಳ ಸಭೆ ಕರೆದ ಮಲ್ಲಿಕಾರ್ಜುನ ಖರ್ಗೆ

Photo:ANI
ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಒಮ್ಮತ ಮೂಡಿಸಲು ಎಲ್ಲಾ ವಿರೋಧ ಪಕ್ಷಗಳ ಸಭೆಯನ್ನು ಸೋಮವಾರ ಕರೆದಿದ್ದಾರೆ.
"ಮುಂಬರುವ ಅಧಿವೇಶನದ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ನವೆಂಬರ್ 29 ರಂದು ಬೆಳಿಗ್ಗೆ 9:45 ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಎಲ್ಲಾ ವಿರೋಧ ಪಕ್ಷಗಳ ಸಭೆ ಕರೆಯಲಾಗಿದೆ, ಸಭೆಯಲ್ಲಿ ನಾವು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳು ಹಾಗೂ ಅಭಿಪ್ರಾಯಗಳ ಬಗ್ಗೆ ಒಮ್ಮತವನ್ನು ರಚಿಸಲು ಪ್ರಯತ್ನಿಸುತ್ತೇವೆ” ಎಂದು ಖರ್ಗೆ ANI ಗೆ ತಿಳಿಸಿದರು.
ನವೆಂಬರ್ 29 ರಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಕ್ಷವು ಪ್ರಸ್ತಾಪಿಸುವ ವಿಷಯಗಳ ಕುರಿತು ಚರ್ಚಿಸಲು ಪಕ್ಷದ ಸಂಸದೀಯ ಕಾರ್ಯತಂತ್ರದ ಗುಂಪಿನ ಸಭೆಗಾಗಿ ಕಾಂಗ್ರೆಸ್ ನಾಯಕರು ಗುರುವಾರ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದ್ದರು. ಚಳಿಗಾಲದ ಅಧಿವೇಶನದಲ್ಲಿ ಬೆಲೆ ಏರಿಕೆ ಸೇರಿದಂತೆ ಪಕ್ಷವು ಹಲವಾರು ಸಮಸ್ಯೆಗಳನ್ನು ಎತ್ತುವ ಸಾಧ್ಯತೆಯಿದೆ.