ಉಡುಪಿ: ಐವರು ಕೋವಿಡ್ಗೆ ಪಾಸಿಟಿವ್
ಉಡುಪಿ, ನ.27: ಶನಿವಾರ ಜಿಲ್ಲೆಯಲ್ಲಿ ಐವರು ಕೋವಿಡ್ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ ನಾಲ್ವರು ಕೋವಿಡ್ನಿಂದ ಗುಣಮುಖರಾದರೆ, 50 ಮಂದಿ ಇನ್ನೂ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಒಬ್ಬ ಪುರುಷ ಹಾಗೂ ನಾಲ್ವರು ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ ನಾಲ್ವರು ಉಡುಪಿ ತಾಲೂಕಿನವರಾದರೆ ಒಬ್ಬರು ಕುಂದಾಪುರದವರು. ಪಾಸಿಟಿವ್ ಬಂದ ಎಲ್ಲಾ ಐವರನ್ನು ಅವರವರ ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರ ಸಹ ಜಿಲ್ಲೆಯಲ್ಲಿ ಕೊರೋನದಿಂದ ಯಾರೂ ಮೃತಪಟ್ಟಿಲ್ಲ.
ಶುಕ್ರವಾರ ಸೋಂಕಿನಿಂದ ನಾಲ್ವರು ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 76,335 ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 1265 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,861ಕ್ಕೇರಿದೆ.
4046 ಮಂದಿಗೆ ಲಸಿಕೆ: ಇಂದು ಜಿಲ್ಲೆಯಲ್ಲಿ ಒಟ್ಟು 4,046 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ಇವರಲ್ಲಿ 385 ಮಂದಿ ಮೊದಲ ಡೋಸ್ ಹಾಗೂ 3661 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 249 ಮಂದಿ ಮೊದಲ ಡೋಸ್ ಹಾಗೂ 2597 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 136 ಮಂದಿ ಮೊದಲ ಡೋಸ್ ಹಾಗೂ 1061 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಅಲ್ಲದೇ ಒಬ್ಬ ಆರೋಗ್ಯ ಕಾರ್ಯಕರ್ತ ಹಾಗೂ ಇಬ್ಬರು ಮುಂಚೂಣಿ ಕಾರ್ಯಕರ್ತರು ಸಹ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.