ಶಾಸಕಾಂಗವು ಕಾನೂನಿನ ಪರಿಣಾಮವನ್ನು ಅಧ್ಯಯನ ಮಾಡದಿರುವುದು ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸುತ್ತದೆ: ಸಿಜೆಐ ಎನ್.ವಿ.ರಮಣ
ಸಿಜೆಐ ಎನ್.ವಿ.ರಮಣ
ಹೊಸದಿಲ್ಲಿ,ನ.27: ಶಾಸಕಾಂಗವು ತಾನು ತರುವ ಕಾನೂನುಗಳ ಪರಿಣಾಮವನ್ನು ಅಧ್ಯಯನ ಅಥವಾ ಮೌಲ್ಯಮಾಪನವನ್ನು ಮಾಡುವುದಿಲ್ಲ ಮತ್ತು ಇದು ಕೆಲವೊಮ್ಮೆ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ ಹಾಗೂ ನ್ಯಾಯಾಂಗದ ಮೇಲೆ ಪ್ರಕರಣಗಳ ಹೆಚ್ಚಿನ ಹೊರೆಯನ್ನುಂಟು ಮಾಡುತ್ತದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರು ಶನಿವಾರ ಇಲ್ಲಿ ಹೇಳಿದರು.
ವಿಶೇಷ ಮೂಲಸೌಕರ್ಯಗಳನ್ನು ಸೃಷ್ಟಿಸದೆ ಸುಮ್ಮನೆ ಈಗಿರುವ ನ್ಯಾಯಾಲಯಗಳನ್ನು ವಾಣಿಜ್ಯ ನ್ಯಾಯಾಲಯಗಳೆಂದು ಮರು ಬ್ರಾಂಡ್ ಮಾಡುವುದು ಪ್ರಕರಣಗಳ ಬಾಕಿಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದರು.
‘ನಮಗೆ ಯಾವುದೇ ಟೀಕೆಗಳು ಅಥವಾ ಅಡೆತಡೆಗಳು ಎದುರಾದರೂ ನ್ಯಾಯವನ್ನು ಒದಗಿಸುವ ನಮ್ಮ ಅಭಿಯಾನ ನಿಲ್ಲುವುದಿಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನ್ಯಾಯಾಂಗವನ್ನು ಬಲಗೊಳಿಸಲು ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸಲು ನಮ್ಮ ಕರ್ತವ್ಯವನ್ನು ನಾವು ಮುಂದುವರಿಸಬೇಕು’ ಎಂದು ಅವರು ನ್ಯಾಯಾಧೀಶರು ಮತ್ತು ವಕೀಲರನ್ನುದ್ದೇಶಿಸಿ ಹೇಳಿದರು.
ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಕೇಂದ್ರ ಕಾನೂನು ಸಚಿವ ಕಿರಣ ರಿಜಿಜು ಅವರ ಉಪಸ್ಥಿತಿಯಲ್ಲಿ ಸಂವಿಧಾನ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ನ್ಯಾ.ರಮಣ,ನ್ಯಾಯಾಂಗದಲ್ಲಿ ಪ್ರಕರಣಗಳ ಬಾಕಿ ಸಮಸ್ಯೆಯು ಹಲವಾರು ಮುಖಗಳನ್ನು ಹೊಂದಿದೆ. ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ನೀಡಲಾದ ಸಲಹೆಗಳನ್ನು ಸರಕಾರವು ಪರಿಗಣಿಸುತ್ತದೆ ಮತ್ತು ಪ್ರಚಲಿತ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ತಾನು ಆಶಿಸಿದ್ದೇನೆ ಎಂದು ಹೇಳಿದರು.
ನ್ಯಾಯಾಂಗ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಸರಕಾರವು 9,000 ಕೋ.ರೂ.ಗಳನ್ನು ಹಂಚಿಕೆ ಮಾಡಿದೆ ಎಂಬ ಕೇಂದ್ರ ಕಾನೂನು ಸಚಿವರ ಪ್ರಕಟಣೆಯನ್ನು ಸ್ವಾಗತಿಸಿದ ಅವರು,ಆದಾಗ್ಯೂ ಹಣಕಾಸು ದೊಡ್ಡ ಸಮಸ್ಯೆಯಲ್ಲ. ಕೆಲವು ರಾಜ್ಯಗಳು ತಾಳೆಯಾಗುವ ಅನುದಾನವನ್ನು ಒದಗಿಸಲು ಮುಂದೆ ಬರುತ್ತಿಲ್ಲ ಎನ್ನುವುದು ಸಮಸ್ಯೆಯಾಗಿದೆ. ಪರಿಣಾಮವಾಗಿ ಹೆಚ್ಚಿನ ಕೇಂದ್ರದ ಹಣ ಬಳಕೆಯಾಗದೆ ಉಳಿದುಕೊಳ್ಳುತ್ತದೆ ಎಂದರು.