ತ್ರಿಪುರಾ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತಗಳ ಎಣಿಕೆ: ಬಿಜೆಪಿಗೆ ಆರಂಭಿಕ ಮುನ್ನಡೆ
ಸಾಂದರ್ಭಿಕ ಚಿತ್ರ (PTI)
ಅಗರ್ತಲ: ತ್ರಿಪುರಾದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಮುಂಜಾನೆ 8ಕ್ಕೆ ಬಿಗಿ ಬಂದೋಬಸ್ತ್ ನ ನಡುವೆ ಮತಗಳ ಎಣಿಕೆ ಆರಂಭವಾಗಿದೆ.
ಅಗರ್ತಲ ಮಹಾನಗರ ಪಾಲಿಕೆಯ ಮೂರು ವಾರ್ಡ್ಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು, ಪಕ್ಷದ ತುಷಾರ್ ಕಾಂತಿ ಭಟ್ಟಾಚಾರ್ಜಿ ಮತ್ತು ಅಭಿಷೇಕ್ ದತ್ತಾ ಕ್ರಮವಾಗಿ 35 ಹಾಗೂ 18ನೇ ವಾರ್ಡ್ ನಿಂದ ಈಗಾಗಲೇ ಆಯ್ಕೆಯಾಗಿದ್ದಾರೆ.
ಮುನ್ಸಿಪಲ್ ಮತ್ತು ನಗರ ಪಂಚಾಯ್ತಿಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 6 ನಗರ ಪಂಚಾಯ್ತಿ, ಏಳು ಮುನ್ಸಿಪಲ್ ಕೌನ್ಸಿಲ್ ಹಾಗು ಅಗರ್ತಲ ಮುನ್ಸಿಪಲ್ ಕಾರ್ಪೊರೇಷನ್ಗೆ ಚುನಾವಣೆ ನಡೆದಿದ್ದು, 13 ಎಣಿಕೆ ಕೇಂದ್ರಗಳಲ್ಲಿ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಎಎಂಸಿಯ 51 ವಾರ್ಡ್ಗಳು, 13 ಮುನ್ಸಿಪಲ್ ಕೌನ್ಸಿಲ್ ಮತ್ತು ಆರು ನಗರ ಪಂಚಾಯತ್ ಗಳ 334 ಸ್ಥಾನಗಳಲ್ಲಿ ಮತದಾನ ನಡೆದಿತ್ತು. ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿದ್ದು, ಪಕ್ಷದ 112 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 222 ಸ್ಥಾನಗಳಿಗೆ 785 ಮಂದಿ ಕಣದಲ್ಲಿದ್ದಾರೆ.
ಈಶಾನ್ಯ ರಾಜ್ಯಗಳು ಮತ್ತು ಇತರ ಎಲ್ಲ ಕಡೆಗಳಲ್ಲಿ ಕಣಕ್ಕೆ ಧುಮುಕುವ ಮೂಲಕ ರಾಷ್ತ್ರೀಯ ಪಕ್ಷವಾಗಿ ಮಾನ್ಯತೆ ಪಡೆಯುವ ಪ್ರಯತ್ನದಲ್ಲಿರುವ ತೃಣಮೂಲ ಕಾಂಗ್ರೆಸ್ ಹಾಗೂ ಆಡಳಿತಾರೂಢ ಬಿಜೆಪಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಜತೆಗೆ ಕೆಲ ವರ್ಷ ಹಿಂದೆ ಅಧಿಕಾರದಿಂದ ಕೆಳಗಿಳಿಸಲ್ಪಟ್ಟ ಸಿಪಿಐ(ಎಂ) ಕೂಡಾ ಕಣದಲ್ಲಿದೆ.