ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಭಾರಿ ನಷ್ಟ
ಬೆಂಗಳೂರು: ಅಕಾಲಿಕ ಮಳೆಯಿಂದಾಗಿ ಈ ಬಾರಿ ರಾಜ್ಯದಲ್ಲಿ ಬೆಳೆದು ನಿಂತಿರುವ ಕಾಫಿ ಬೆಳೆಗೆ ವ್ಯಾಪಕ ಹಾನಿಯಾಗಿದ್ದು, ಸುಮಾರು ಮೂರನೇ ಒಂದರಷ್ಟು ಬೆಳೆ ನಾಶವಾಗಿದೆ. ಮುಂದಿನ ಕೆಲ ದಿನಗಳಲ್ಲಿ ಕೂಡಾ ಮಳೆ ಮುಂದುವರಿಯುವ ಮುನ್ಸೂಚನೆ ಇದ್ದು, ಇದು ಕಾಫಿ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಕಾಫಿ ಮಂಡಳಿಯ ಮೂಲಗಳ ಪ್ರಕಾರ, ಕಾಫಿ ಬೆಳೆಗೆ ಆಗಿರುವ ಹಾನಿ ಶೇಕಡ 33 ಎಂದು ಆರಂಭಿಕವಾಗಿ ಅಂದಾಜಿಸಲಾಗಿದೆ. ಸಮಿತಿಗಳು ಸಮೀಕ್ಷೆ ನಡೆಸಿದ ಬಳಿಕ ನಿಖರ ಪ್ರಮಾಣ ತಿಳಿದು ಬರಲಿದೆ. ಕರ್ನಾಟಕದಲ್ಲಿ ಕಾಫಿ ಬೆಳೆಯುವ ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾಡಳಿತಗಳು ರಚಿಸಿರುವ ಸಮಿತಿಗಳು ಬೆಳೆ ಹಾನಿಯ ಸಮೀಕ್ಷೆ ನಡೆಸುತ್ತಿವೆ.
"ಇದು ದೊಡ್ಡ ಪ್ರಮಾಣದ ನಷ್ಟ. ನಾನು ಕಾಫಿ ಬೆಳೆಯುವ ಮೂರು ಜಿಲ್ಲೆಗಳ 10-15 ಗ್ರಾಮಗಳಿಗೆ ಭೇಟಿ ನೀಡಿದ್ದು, ಮೂರನೇ ಒಂದಕ್ಕಿಂತಲೂ ಹೆಚ್ಚು ಬೆಳೆ ನಾಶವಾಗಿರುವುದು ಕಂಡುಬರುತ್ತಿದೆ" ಎಂದು ಕಾಫಿ ಮಂಡಳಿ ಸಿಇಓ ಕೆ.ಜಿ.ಜಗದೀಶ್ ಹೇಳಿದ್ದಾರೆ.
ಕಾಫಿ ಮಂಡಳಿ, ಕಂದಾಯ ಇಲಾಖೆ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ಸಮೀಕ್ಷೆ ನಡೆಸುತ್ತಿದೆ. ಮುಂದಿನ 10 ದಿನಗಳಲ್ಲಿ ಅಂತಿಮವಾಗಿ ನಷ್ಟದ ಪ್ರಮಾಣದ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಅವರು ವಿವರಿಸಿದರು.
ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾರರಿಗೆ ಫಸಲು ನಷ್ಟವಾಗುತ್ತಿರುವುದು ಇದು ಸತತ ಎರಡನೇ ಬಾರಿ. ಕಳೆದ ವರ್ಷ ಕಾಫಿ ಒಣಗಿಸುವ ವೇಲೆ ಹಾನಿ ಸಂಭವಿಸಿದ್ದರೆ, ಈ ಬಾರಿ ಕಾಫಿ ಹಣ್ಣನ್ನು ಕೀಳಲು ಅವಕಾಶವಾಗುತ್ತಿಲ್ಲ ಎಂದು ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರ ಮೊಗಣ್ಣ ಗೌಡ ಹೇಳಿದರು.
ಕಾಫಿ ಮಂಡಳಿ ಅಧಿಕಾರಿಗಳು, ತಜ್ಞರು ಮತ್ತು ರೈತರ ಪ್ರಕಾರ ಅರೇಬಿಯಾ ಕಾಫಿ ಬೆಳೆದವರಿಗೆ ಕೊಯ್ಲು ಸಮಯದಲ್ಲಿ ಮಳೆ ಬಿದ್ದಿರುವುದರಿಂದ ಗರಿಷ್ಠ ಪ್ರಮಾಣದ ಹಾನಿಯಾಗಿದೆ. ರೊಬಸ್ಟಾ ಇನ್ನೂ ಹಣ್ಣಾಗಿಲ್ಲ. ಡಿಸೆಂಬರ್ ವೇಳೆಗೆ ಇದು ಹಣ್ಣಾಗುತ್ತದೆ. ಮುಂದಿನ ಕೆಲ ದಿನಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಅರೇಬಿಕಾ ತಳಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ.