ಲಕ್ನೋದ ಕಾಂಗ್ರೆಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ರಾಜಸ್ಥಾನದ ನಿರುದ್ಯೋಗಿ ಯುವಕರು
ಕಾರಣವೇನು ಗೊತ್ತೇ?
Photo: Twitter/ TheUpenYadav
ಲಕ್ನೊ: ರಾಜಸ್ಥಾನದ ನಿರುದ್ಯೋಗಿ ಯುವಕರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಬೇಕೆಂದು ಒತ್ತಾಯಿಸಿ ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಧರಣಿ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ರಾಜಸ್ಥಾನ ಬೆರೋಜ್ಗರ್ ಏಕೀಕೃತ ಮಹಾಸಂಘ್ (ಆರ್ ಬಿಇಎಂ) ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ. ರಾಜಸ್ಥಾನದ ನಿರುದ್ಯೋಗಿಗಳಿಗೆ ನೀಡಿರುವ ದೀರ್ಘಕಾಲದ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ರಾಜಸ್ಥಾನದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ಹೇರುವ ಗುರಿಯನ್ನು ಈ ಪ್ರತಿಭಟನೆ ಹೊಂದಿದೆ.
ಈಗಾಗಲೇ ನೇಮಕಾತಿ ಪರೀಕ್ಷೆಗಳನ್ನು ನಡೆಸಿರುವ ಹಲವಾರು ಸರಕಾರಿ ಉದ್ಯೋಗಗಳಲ್ಲಿ ನೇಮಕಾತಿ, ರಾಜ್ಯ ಸರಕಾರಿ ಉದ್ಯೋಗಗಳ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವವರ ವಿರುದ್ಧ ಜಾಮೀನು ರಹಿತ ಕಾನೂನು ರೂಪಿಸುವುದು ಪ್ರತಿಭಟನಾಕಾರರ ಬೇಡಿಕೆಗಳಾಗಿವೆ.
“ನಾವು ಸದ್ಯ ಲಕ್ನೋದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಹೊರಗೆ ಧರಣಿ ಕುಳಿತಿದ್ದೇವೆ. ಈಗ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದೇವೆ. ಕಳೆದ 47 ದಿನಗಳಿಂದ ಜೈಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಾವು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಲು ಬಯಸುತ್ತೇವೆ. ಉತ್ತರ ಪ್ರದೇಶದಲ್ಲಿ 20 ಲಕ್ಷ ಉದ್ಯೋಗ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ. 2018ರ ವಿಧಾನಸಭೆ ಚುನಾವಣೆಗೂ ಮುನ್ನ ನಾವು ಕಾಂಗ್ರೆಸ್ಗೆ ಬೆಂಬಲ ನೀಡಿದ್ದೆವು. ಆದರೆ ನಮಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ’’ ಎಂದು ಆರ್ಬಿಇಎಂ ಅಧ್ಯಕ್ಷ ಉಪೇನ್ ಯಾದವ್ ಸೋಮವಾರ ಹೇಳಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಗೆಹ್ಲೋಟ್ ಪ್ರತಿಪಕ್ಷಗಳು ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿವೆ ಎಂದರು.
"ಲಕ್ನೋದಲ್ಲಿ ಧರಣಿ ನಡೆಸುವುದರ ಹಿಂದಿನ ತರ್ಕವೇನು? ಲಕ್ನೋದಲ್ಲಿ ನಮ್ಮ ಸ್ನೇಹಿತರು ಧರಣಿ ನಡೆಸುತ್ತಿದ್ದಾರೆಯೇ? ಇದು ರಾಜಕೀಯವಲ್ಲವೇ? ಪ್ರತಿಪಕ್ಷಗಳು ಅವರನ್ನು ಪ್ರಚೋದಿಸುತ್ತಿವೆ. ಇದರ ತರ್ಕವೇನು? ನೀವು ಅವರನ್ನು ಲಕ್ನೋಗೆ ಕಳುಹಿಸುತ್ತಿದ್ದೀರಿ...ಅಲ್ಲಿನ ಸರಕಾರ ಬಿಜೆಪಿಯದ್ದು” ಎಂದು ಗೆಹ್ಲೋಟ್ ಹೇಳಿದರು.