ಭಾರತದಲ್ಲಿ ‘ಒಮಿಕ್ರಾನ್’ ಪತ್ತೆಯಾಗಿಲ್ಲ: ಅಧಿಕಾರಿಗಳು

ಹೊಸದಿಲ್ಲಿ, ನ. 29: ಕೊರೋನ ವೈರಸ್‌ನ ಹೊಸ ಪ್ರಬೇಧ ಒಮಿಕ್ರಾನ್ ಭಾರತದಲ್ಲಿ ಇದುವರೆಗೆ ಪತ್ತೆಯಾಗಿಲ್ಲ ಎಂದು ಸರಕಾರದ ಹಿರಿಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಒಮಿಕ್ರಾನ್ ಕಳೆದ ವಾರ ಮೊದಲ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಯಿತು. ಇದನ್ನು ವಿಶ್ವಸಂಸ್ಥೆ ಕಳವಳಕಾರಿ ರೂಪಾಂತರ ವೈರಸ್ ಎಂದು ಹೇಳಿದೆ. ಕೊರೋನ ವೈರಸ್‌ನ ಹೊಸ ಪ್ರಬೇಧ ಒಮಿಕ್ರಾನ್ ಭಾರತದಲ್ಲಿ ಇದುವರೆಗೆ ಪತ್ತೆಯಾಗಿಲ್ಲ. ಐಎನ್‌ಎಸ್‌ಎಸಿಒಜಿ ಪರಿಸ್ಥಿತಿಯನ್ನು ಸಮೀಪದಿಂದ ಪರಿಶೀಲಿಸುತ್ತಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಪಡೆದ ಪಾಸಿಟಿವ್ ಮಾದರಿಯ ಜೆನೋಮಿಕ್ ವಿಶ್ಲೇಷಣೆಯ ಫಲಿತಾಂಶವನ್ನು ನಿರೀಕ್ಷಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚು ಸಾಂಕ್ರಾಮಿಕವಾಗಿರುವ ಕೊರೋನ ವೈರಸ್‌ನ ಒಮಿಕ್ರಾನ್ ಪ್ರಬೇಧ ಹಲವು ದೇಶಗಳಲ್ಲಿ ಹರಡುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿರುವ ನಡುವೆ ರವಿವಾರ ಕೇಂದ್ರ ಸರಕಾರ ಒಮಿಕ್ರಾನ್‌ನ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಅಥವಾ ಅಂತಹ ರಾಷ್ಟ್ರಗಳಿಂದ ಹಾದು ಬರುವ ಪ್ರಯಾಣಿಕರಿಗೆ ಕಠಿಣ ಮಾರ್ಗಸೂಚಿಗಳನ್ನು ವಿಧಿಸಿದೆ.
ಅಂತಾರಾಷ್ಟ್ರೀಯ ವಿಮಾನಗಳನ್ನು ಮರು ಆರಂಭಿಸುವ ಬಗ್ಗೆ ಪರಿಶೀಲಿಸಲು ಕೂಡ ಕೇಂದ್ರ ಸರಕಾರ ನಿರ್ಧರಿಸಿದೆ.