ಒಮಿಕ್ರಾನ್ ಭೀತಿ : ಕಾಮನ್ ವೆಲ್ತ್ ಕುಸ್ತಿ ಮುಂದೂಡಿಕೆ

ಸಾಂದರ್ಭಿಕ ಚಿತ್ರ
ಚೆನ್ನೈ: ದಕ್ಷಿಣ ಆಫ್ರಿಕಾದಲ್ಲಿ ಡಿಸೆಂಬರ್ 3ರಿಂದ 5ರವರೆಗೆ ನಡೆಯಬೇಕಿದ್ದ ಕಾಮನ್ ವೆಲ್ತ್ ಕುಸ್ತಿ ಚಾಂಪಿಯನ್ ಶಿಪ್, ಹೊಸ ಕೋವಿಡ್-19 ವೈರಸ್ ಪ್ರಬೇಧವಾದ ಒಮಿಕ್ರಾನ್ ಭೀತಿಯಿಂದಾಗಿ ಮುಂದೂಡಲ್ಪಟ್ಟಿದೆ.
"ಈ ಟೂರ್ನಿಯನ್ನು ಮುಂದೂಡಲಾಗಿದೆ. ಪಾಲ್ಗೊಳ್ಳಲು ಉದ್ದೇಶಿಸಿದ್ದ ಎಲ್ಲ ದೇಶಗಳಿಗೆ ಸಂಘಟಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ" ಎಂದು ಡಬ್ಲ್ಯುಎಫ್ಐ ಸಹಾಯಕ ಕಾರ್ಯದರ್ಶಿ ವಿನೋದ್ ಥೋಮರ್ ಹೇಳಿದ್ದಾರೆ.
ಫ್ರೀಸ್ಟೈಲ್, ಗ್ರೀಕೊ ರೋಮನ್ ಮತ್ತು ಮಹಿಳಾ ಕುಸ್ತಿ ಹೀಗೆ ಮೂರು ಶೈಲಿಯ ಪ್ರತಿ ವಯೋಮಿತಿಯ ವಿಭಾಗದಲ್ಲಿ ತಲಾ ಎರಡು ಕುಸ್ತಿಪಟುಗಳು ಎರಡು ತಂಡಗಳನ್ನು ಕಣಕ್ಕೆ ಇಳಿಸಲು ಭಾರತದ ಕುಸ್ತಿ ಫೆಡರೇಷನ್ ನಿರ್ಧರಿಸಿತ್ತು. ಹಿರಿಯರ ರಾಷ್ಟ್ರೀಯ ಚಾಂಪಿಯನ್ ಶಿಪ್ನಲ್ಲಿ ಪ್ರತಿ ತೂಕ ವಿಭಾಗದಲ್ಲಿ ಮೊದಲ ಎರಡು ಸ್ಥಾನ ಗಳಿಸಿದವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿತ್ತು.
ಕುಸ್ತಿಪಟುಗಳ ಮೊದಲ ತಂಡ ಮಂಗಳವಾರ ದಕ್ಷಿಣ ಆಫ್ರಿಕಾಗೆ ತೆರಳುವ ನಿರೀಕ್ಷೆ ಇತ್ತು. ಅಗ್ರ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ರವಿ ದಾಹಿಯಾ ಮತ್ತು ಅನ್ಷು ಮಲಿಕ್ ಈ ಟೂರ್ನಿಯಿಂದ ಹೊರಗುಳಿದಿದ್ದರು. ಗೀತಾ ಪೊಗಾಟ್ ಮತ್ತು ಕಿರಿಯ ಪಟುಗಳು ಟೂರ್ನಿಯಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದರು. ಇದು ಮುಂದಿನ ವರ್ಷ ನಡೆಸಲು ಉದ್ದೇಶಿಸಿದ್ದ ಕಾಮನ್ ವೆಲ್ತ್ ಕೂಟ ಮತ್ತು ಏಷ್ಯನ್ ಗೇಮ್ಸ್ಗೆ ಪೂರ್ವಸಿದ್ಧತಾ ಟೂರ್ನಿ ಎನಿಸಿಕೊಂಡಿತ್ತು.