ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಪುನರ್ ಪರಿಶೀಲನೆ ಅಗತ್ಯ: ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ

ಬೆಂಗಳೂರು, ನ. 30: ‘ಕೋವಿಡ್ ಹೊಸ ತಳಿ ಓಮಿಕ್ರಾನ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.13ರಿಂದ ನಡೆಸಲು ಉದ್ದೇಶಿಸಿರುವ ವಿಧಾನ ಮಂಡಲ ಅಧಿವೇಶನದ ಬಗ್ಗೆ ಮರುಪಶೀಲನೆ ನಡೆಸುವ ಅಗತ್ಯವಿದೆ' ಎಂದು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಇಂದಿಲ್ಲಿ ಮನವಿ ಮಾಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಮಗ್ರ ಕರ್ನಾಟಕದ ಅಭಿವೃದ್ದಿ ದೃಷ್ಟಿಯಿಂದ ಬೆಳೆಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಕಲಾಪ ನಡೆಸುವುದು ಸ್ವಾಗತಾರ್ಹ. ಆದರೆ, ಕೊರೋನ ಸೋಂಕಿನ ಆತಂಕವಿದ್ದು, ಈಗಾಗಲೇ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಾನು ಸೋಂಕಿನಿಂದ ಚೇತರಿಸಿಕೊಂಡಿದ್ದೇನೆ. ಹೀಗಾಗಿ ಸರಕಾರ ಪುನರ್ ಪರಿಶೀಲನೆ ನಡೆಸಬೇಕು' ಎಂದು ಕೋರಿದರು.
ನೆರೆಯ ಮಹಾರಾಷ್ಟ್ರ, ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಸರಿಯಲ್ಲ. ಜನಸಾಮಾನ್ಯರು ಆತಂಕದಲ್ಲಿದ್ದು, ಓಮಿಕ್ರಾನ್ ಭೀತಿಯೂ ಆವರಿಸಿದೆ. ಹೀಗಾಗಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲೇ ಅಧಿವೇಶನ ನಡೆಸುವುದು ಎಷ್ಟು ಸೂಕ್ತ ಎಂದು ಅವರು ಪ್ರಶ್ನಿಸಿದರು.
ಎಲ್ಲರಿಗೂ ಪ್ರಾಣ ಬಹಳ ಮುಖ್ಯ. ಬಹುತೇಕ ಶಾಸಕರು ಆತಂಕದಲ್ಲಿದ್ದಾರೆ. ಸಚಿವಾಲಯದ ಅಧಿಕಾರಿಗಳು, ನೌಕರರಿಗೆ, ಶಾಸಕರು ಹಾಗೂ ಮಾಧ್ಯಮ ಪ್ರತಿನಿಧಿಗಳಲ್ಲಿಯೂ ಆತಂಕವಿದೆ. ಬೆಂಗಳೂರಿನಲ್ಲೇ ಅಧಿವೇಶನ ನಡೆಸಿದರೆ ಉತ್ತಮ. ಬೆಳಗಾವಿ ಭಾಗದ ಜನರು ಇದಕ್ಕೆ ಸಹಕರಿಸಬೇಕು ಎಂದು ಕುಮಾರಸ್ವಾಮಿ ಇದೇ ವೇಳೆ ಮನವಿ ಮಾಡಿದರು.







