ಎರಡನೇ ತ್ರೈಮಾಸಿಕದಲ್ಲಿ ಶೇ.8.4ಕ್ಕೆ ಹೆಚ್ಚಿದ ಭಾರತದ ಜಿಡಿಪಿ ಪ್ರಗತಿ ದರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ನ.30: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ವೇಗದ ಬೆಳವಣಿಗೆಯೊಂದಿಗೆ ಸದೃಢತೆಯನ್ನು ಕಾಯ್ದುಕೊಂಡಿದೆ. ಜುಲೈ-ಸೆಪ್ಟಂಬರ್ ಅವಧಿಯಲ್ಲಿ ಭಾರತದ ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ)ಯು ಶೇ.8.45ರ ಪ್ರಗತಿ ದರವನ್ನು ದಾಖಲಿಸಿದೆ.
ಹೆಚ್ಚಿನ ಲಸಿಕೆ ಅನುಪಾತ ಹಾಗೂ ಕೈಗಾರಿಕಾ ಮತ್ತು ಸೇವಾ ವಲಯಗಳಲ್ಲಿ ತ್ವರಿತ ಸುಧಾರಣೆಯಿಂದಾಗಿ ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಂಡಿರುವುದು ಜಿಡಿಪಿ ಬೆಳವಣಿಗೆಯು ಧನಾತ್ಮಕವಾಗಿ ಉಳಿಯಲು ಕಾರಣವಾಗಿದೆ. ಅಗತ್ಯ ಮತ್ತು ಅಗತ್ಯವಲ್ಲದ ಸರಕುಗಳಿಗೆ ಹೆಚ್ಚುತ್ತಿರುವ ಬೇಡಿಕೆಯೂ ಜಿಡಿಪಿ ಬೆಳವಣಿಗೆಯ ಸ್ಥಿರವಾದ ಏರಿಕೆಯಲ್ಲಿ ಕೊಡುಗೆಯನ್ನು ಸಲ್ಲಿಸಿದೆ.
ಶೇ,8.45 ಜಿಡಿಪಿ ಪ್ರಗತಿದರವು ತಜ್ಞರ ಈ ಹಿಂದಿನ ಅಂದಾಜುಗಳಿಗೆ ಅನುಗುಣವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕೋವಿಡ್ ಲಾಕ್ಡೌನ್ ಆರ್ಥಿಕತೆಯ ಮೇಲೆ ಬೀರಿದ್ದ ಪರಿಣಾಮದಿಂದಾಗಿ ಜಿಡಿಪಿಯು ಶೇ.7.5ರಷ್ಟು ಸಂಕುಚಿತಗೊಂಡಿತ್ತು.
ಸದ್ಯದ ಸ್ಥಿತಿಯನ್ನು ಪರಿಗಣಿಸಿದರೆ ಹಣದುಬ್ಬರದಲ್ಲಿ ನಿರಂತರ ಏರಿಕೆ,ಹೆಚ್ಚಿನ ಬಡ್ಡಿದರಗಳ ಸಾಧ್ಯತೆ,ಉದ್ಯೋಗಗಳಲ್ಲಿ ನಿಧಾನ ಚೇತರಿಕೆ,ಹೆಚ್ಚುತ್ತಿರುವ ಸಂಪತ್ತಿನ ಅಂತರ ಮತ್ತು ಜಾಗತಿಕ ವ್ಯಾಪಾರದ ಮೇಲೆ ನೂತನ ಒಮೈಕ್ರಾನ್ ಕೋವಿಡ್ ತಳಿಯ ಪರಿಣಾಮಗಳಿಂದಾಗಿ ದೇಶದ ಆರ್ಥಿಕ ಚೇತರಿಕೆಯು ಹಿನ್ನಡೆಯನ್ನು ಕಾಣಬಹುದು.







