ಕೆಬಿಸಿಯ 'ಮಿಡ್ ಬ್ರೈನ್ ಆ್ಯಕ್ಟಿವೇಶನ್' ಕಾರ್ಯಕ್ರಮದ ಕೆಲವು ಅಂಶಗಳನ್ನು ಕೈ ಬಿಟ್ಟ ಸೋನಿ ಟಿವಿ
ವಿಚಾರವಾದಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ನರೇಂದ್ರ ನಾಯಕ್ ಪತ್ರದ ಹಿನ್ನಲೆ

ಹೊಸದಿಲ್ಲಿ, ನ. 30: 'ಮಿಡ್ ಬ್ರೈನ್ ಆ್ಯಕ್ಟಿವೇಶನ್' ಅವೈಜ್ಞಾನಿಕ ಅಭ್ಯಾಸವನ್ನು ಪ್ರದರ್ಶಿಸಿದ ಅಮಿತಾಭ್ ಬಚ್ಚನ್ ನಡೆಸಿ ಕೊಡುವ 'ಕೌನ್ ಬನೇಗಾ ಕರೋಡ್ಪತಿ-13'ರ ಇತ್ತೀಚೆಗಿನ ಕಾರ್ಯಕ್ರಮದ ಕೆಲವು ಅಂಶಗಳನ್ನು ಸೋನಿ ಟಿವಿ ಕೈಬಿಟ್ಟಿದೆ ಎಂದು ‘thenewsminute.com’ ವರದಿ ಮಾಡಿದೆ.
ವಿಚಾರವಾದಿ ನರೇಂದ್ರ ನಾಯಕ್ ಅವರು ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ಇಂಡಿಯಾಕ್ಕೆ ದೂರು ನೀಡಿದ ಬಳಿಕ ಯುಟ್ಯೂಬ್ ಹಾಗೂ ಇತರ ವೇದಿಕೆಗಳಿಂದ ಕೂಡ ಈ ಕಾರ್ಯಕ್ರಮದ ವೀಡಿಯೊದ ಭಾಗವನ್ನು ತೆಗೆದು ಹಾಕಲಾಗಿದೆ. ಕಣ್ಣು ಮುಚ್ಚಿ, ವಾಸನೆ ಮೂಲಕ ಪುಸ್ತಕ ಓದಬಲ್ಲೆ ಎಂಬುದನ್ನು ಹದಿಹರೆಯದ ಬಾಲಕಿಯೋರ್ವಳು ಪ್ರದರ್ಶಿಸಿದ್ದಾಳೆ ಎಂದು ವರದಿಯಾದ ವೀಡಿಯೋದ ಭಾಗವನ್ನು ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ಇಂಡಿಯಾ ತೆಗೆದು ಹಾಕಿದೆ.
ಫೆಡರೇಶನ್ ಆಫ್ ಇಂಡಿಯನ್ ರ್ಯಾಶನಲಿಸ್ಟ್ ಅಸೋಸಿಯೇಸನ್ ನ ಅಧ್ಯಕ್ಷ ನರೇಂದ್ರ ನಾಯಕ್, ‘‘ಮಧ್ಯ ಮೆದುಳನ್ನು ಕ್ರಿಯಾಶೀಲಗೊಳಿಸುವ ಮೂಲಕ ಮಕ್ಕಳ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತೇವೆ ಎಂದು ಪ್ರತಿಪಾದಿಸಿ ಹಲವು ಸಂಸ್ಥೆಗಳು ಈ ಹಿಂದೆ ಹೆತ್ತವರನ್ನು ಮೂರ್ಖರನ್ನಾಗಿಸಿದೆ’’ ಎಂದಿದ್ದಾರೆ. ‘‘ಇಂತಹ ಪ್ರತಿಪಾದನೆಗಳಿಗೆ ಪ್ರಚಾರ ನೀಡುವ ಮೂಲಕ ನೀವು ನಮ್ಮ ದೇಶದ ಗೌರವಕ್ಕೆ ಧಕ್ಕೆ ತರುತ್ತಿದ್ದೀರಿ. ವಸ್ತುವಿನಿಂದ ಬೆಳಕು ತಮ್ಮ ಅಕ್ಷಿಪಟಲದ ಮೇಲೆ ಬೀಳದ ಹೊರತಾಗಿಯೂ ಮಕ್ಕಳು ಕಾಣಬಹುದು ಎಂದು ಹೇಳುತ್ತಿರುವುದನ್ನು ಕೇಳಿ ಜಗತ್ತು ನಗಬಹುದು’’ ಎಂದು ನರೇಂದ್ರ ನಾಯಕ್ ಅವರು ಪತ್ರದಲ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೋನಿ, ‘‘ಮುಂದಿನ ಸಂಚಿಕೆಗಳಲ್ಲಿ ಇಂತಹ ಪ್ರಮಾದವನ್ನು ತಪ್ಪಿಸಲು ಹಾಗೂ ಹೆಚ್ಚು ಎಚ್ಚರಿಕೆಯಿಂದ ಇರಲು ತಂಡವನ್ನು ಸಂವೇದನಾಶೀಲಗೊಳಿಸಿದ್ದೇವೆ’’ ಎಂದಿದೆ.
ಈ ಬಗ್ಗೆ 'ವಾರ್ತಾಭಾರತಿ'ಗೆ ಪ್ರತಿಕ್ರಿಯೆ ನೀಡಿರುವ ಪ್ರೊ. ನರೇಂದ್ರ ನಾಯಕ್, "ಕೆಲವು ದಿನಗಳ ಹಿಂದೆ ನಾನು ಸಂಬಂಧಪಟ್ಟ ಸಂಸ್ಥೆಗೆ ಪತ್ರ ಬರೆದಿದ್ದೆ. ಅಲ್ಲದೆ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡು ಅಮಿತಾ ಬಚ್ಚನ್‌ರ ಗಮನವನ್ನೂ ಸೆಳೆದಿದ್ದೆ. ನಾನು ಬರೆದ ಪತ್ರಕ್ಕೆ ಸೋನಿ ಟಿವಿ ಸ್ಪಂದಿಸಿದೆ. ಹಲವು ವರ್ಷಗಳಿಂದ ಮೌಢ್ಯ ಬಿತ್ತುವುದರ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಹೋರಾಟ ಮುಂದುವರಿಯಲಿದೆ" ಎಂದು ತಿಳಿಸಿದ್ದಾರೆ