ಅಡ್ಮಿರಲ್ ಆರ್.ಹರಿಕುಮಾರ್ ನೌಕಾಪಡೆಯ ನೂತನ ಮುಖ್ಯಸ್ಥ

ಅಡ್ಮಿರಲ್ ಆರ್.ಹರಿಕುಮಾರ್(photo:PTI)
ಹೊಸದಿಲ್ಲಿ,ನ.30: ಅಡ್ಮಿರಲ್ ಆರ್.ಹರಿಕುಮಾರ್ ಅವರು ಮಂಗಳವಾರ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರವನ್ನು ಸ್ವೀಕರಿಸಿದರು. ಅವರ ಪೂರ್ವಾಧಿಕಾರಿ ಅಡ್ಮಿರಲ್ ಕರಮಬೀರ್ ಸಿಂಗ್ ಎರಡು ವರ್ಷಗಳ ಅಧಿಕಾರದ ಬಳಿಕ ನಿವೃತ್ತರಾಗಿದ್ದು,ಅವರು ನೌಕಾಪಡೆಯಲ್ಲಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ನೌಕಾಪಡೆಯ 25ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವ ಮುನ್ನ ಹರಿಕುಮಾರ್ ವೆಸ್ಟರ್ನ್ ನೇವಲ್ ಕಮಾಂಡರ್ ಆಗಿದ್ದರು. ನ್ಯಾಷನಲ್ ಡಿಫೆನ್ಸ್ ಅಕಾಡಮಿಯ ಹಳೆಯ ವಿದ್ಯಾರ್ಥಿಯಾಗಿರುವ ಅವರು 1983,ಜ.1ರಂದು ನೌಕಾಪಡೆಗೆ ಸೇರ್ಪಡೆಗೊಂಡಿದ್ದರು. ತನ್ನ 38 ವರ್ಷಗಳ ವೃತ್ತಿಜೀವನದಲ್ಲಿ ಕೋಸ್ಟ್ಗಾರ್ಡ್ ಶಿಪ್ ಸಿ-01 ಮತ್ತು ಭಾರತೀಯ ನೌಕಾಪಡೆ ಹಡಗುಗಳ ಕಮಾಂಡರ್ ಸೇರಿದಂತೆ ಹಲವಾರು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಿಷಾಂಕ್,ಕೋರಾ,ರಣವೀರ ಮತ್ತು ವಿಮಾನವಾಹಕ ಐಎನ್ಎಸ್ ವಿರಾಟ್ನಂತಹ ನೌಕೆಗಳ ಉಸ್ತುವಾರಿಯನ್ನೂ ಹೊಂದಿದ್ದರು.
ಪರಮ ವಿಶಿಷ್ಟ ಸೇವಾ ಪದಕ,ಅತಿ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಸೇರಿದಂತೆ ಹಲವಾರು ಪದಕಗಳನ್ನು ಹರಿಕುಮಾರ್ ಭಾಜನರಾಗಿದ್ದಾರೆ.