ಮಂಗಳೂರು: ದೇವಸ್ಥಾನ- ದೈವಸ್ಥಾನಗಳಿಗೆ ರಕ್ಷಣೆ ನೀಡಲು ವಿಎಚ್‌ಪಿ ಮನವಿ
ಮಂಗಳೂರು, ನ.30: ದ.ಕ.ಜಿಲ್ಲೆಯ ದೇವಸ್ಥಾನ-ದೈವಸ್ಥಾನಗಳನ್ನು ಅಪವಿತ್ರಗೊಳಿಸುವ ಷಡ್ಯಂತ್ರ ಹೆಚ್ಚಾಗುತ್ತಿರುವುದರಿಂದ ದೇವಸ್ಥಾನಗಳಿಗೆ ಸಿಸಿಟಿವಿ ಅಳವಡಿಸಿ ಸೂಕ್ತ ರಕ್ಷಣೆ ನೀಡಲು ಧಾರ್ಮಿಕ ದತ್ತಿ ಇಲಾಖೆ ಮುಂದಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧಾರ್ಮಿಕ ದತ್ತಿ ಇಲಾಖೆಗೆ ಒಳಪಡದ ದೇವಸ್ಥಾನ ಮತ್ತು ಭಜನಾ ಮಂದಿರಗಳಲ್ಲಿ ಆಯಾ ಆಡಳಿತ ಮಂಡಳಿ, ಸ್ಥಳೀಯ ಸಂಘ ಸಂಸ್ಥೆಗಳು ಸಿಸಿಟಿವಿ ಅಳವಡಿಸುವಂತಾಗಬೇಕು. ಅಲ್ಲಿ ಸ್ಥಳೀಯರ ತಂಡಗಳನ್ನು ರಚಿಸಿ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ನಗರದ ಕೂಳೂರು ಮತ್ತು ಕೋಡಿಕಲ್ ನಾಗಬನಗಳ ನಾಗನ ಕಲ್ಲುಗಳನ್ನು ಎಸೆದು ಅಪವಿತ್ರಗೊಳಿಸಿದ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ ರಚಿಸಬೇಕು ಎಂದು ಕೃಷ್ಣಮೂರ್ತಿ ಆಗ್ರಹಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವರನ್ನು ಅಶ್ಲೀಲವಾಗಿ ಚಿತ್ರಿಸಿ ಅವಮಾನಗೊಳಿಸಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಆರೋಪಿಗಳನ್ನು ಬಂಧಿಸಿಲ್ಲ. ಇಂತಹ ಕೃತ್ಯ ಎಸಗುವ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಉಪಾಧ್ಯಕ್ಷ ಸಂಜೀವ ಸೂಟರ್‌ಪೇಟೆ, ಸಹ ಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್ ಉಪಸ್ಥಿತರಿದ್ದರು.







