ಫೋಟೋಗ್ರಾಫರ್ ಕೊಲೆ ಪ್ರಕರಣ: ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ಪುತ್ತೂರು: ಮೈಸೂರಿನಲ್ಲಿ ಫೋಟೋಗ್ರಾಫರ್ ಆಗಿದ್ದ ಜಗದೀಶ್ ಅವರನ್ನು ಪುತ್ತೂರಿನಲ್ಲಿ ಕೊಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿದ್ದ ಮೂವರು ಆರೋಪಿಗಳನ್ನು ಮಂಗಳವಾರ ಪೊಲೀಸರು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೈಸೂರಿನಲ್ಲಿ ವಾಸವಾಗಿದ್ದ ಜಗದೀಶ್ ಅವರು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ಮತ್ತು ಪಡುವನ್ನೂರು ಗ್ರಾದಮ ಪಟ್ಲಡ್ಕ ಎಂಬಲ್ಲಿ ಕೃಷಿ ಜಮೀನು ಹೊಂದಿದ್ದು, ಅದನ್ನು ನೋಡಿಕೊಂಡು ಹೋಗಲೆಂದು ನ. 21ರಂದು ಆಗಮಿಸಿದ್ದರು. ಬಳಿಕ ಅವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಶಶಿಧರ್ ಎಂಬವರು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ಅವರ ಕೊಲೆಯಾಗಿರಬಹುದು ಎಂದು ಶಶಿಧರ್ ಶಂಕೆ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಪೊಲೀಸ್ ವಿಶೇಷ ತಂಡ ರಚಿಸಿ ತನಿಖೆ ಮುಂದುವರಿಸಲಾಗಿತ್ತು.
ಈ ತಂಡವು ಕೊಲೆಯ ಜಾಡು ಪತ್ತೆ ಹಚ್ಚಿ ಕೊಲೆ ನಡೆಸಿದ ಆರೋಪಿಗಳಾದ ಜಗದೀಶ್ ಅವರ ಮಾವ ಪಡುವನ್ನೂರು ಗ್ರಾಮದ ಪಟ್ಲಡ್ಕ ನಿವಾಸಿ ಬಾಲಕೃಷ್ಣ ರೈ, ಅವರ ಪುತ್ರ ಪ್ರಶಾಂತ್ ರೈ, ಪತ್ನಿ ಜಯಲಕ್ಷ್ಮೀ, ನೆರೆಯ ನಿವಾಸಿ ಜೀವನ್ ಪ್ರಸಾದ್ ಮತ್ತು ಬಡಗನ್ನೂರು ಗ್ರಾಮದ ಅನಿಲೆ ನಿವಾಸಿ ಜಯರಾಜ್ ಶೆಟ್ಟಿ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಪೈಕಿ ಬಾಲಕೃಷ್ಣ ರೈ, ಪ್ರಶಾಂತ್ ರೈ ಮತ್ತು ಜೀವನ್ ಪ್ರಸಾದ್ ಅವರನ್ನು ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊ ಳ್ಳಲಾಗಿತ್ತು. ಇದೀಗ ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.







