12 ಸಂಸದರ ಅಮಾನತನ್ನು ಪ್ರತಿಭಟಿಸಿ ಸಂಸತ್ತಿನಲ್ಲಿ ಪ್ರತಿಪಕ್ಷ ಸದಸ್ಯರ ಸಭಾತ್ಯಾಗ

ಪ್ರತಿಪಕ್ಷ ಸದಸ್ಯರ ಸಭಾತ್ಯಾಗ(photo:PTI)
ಹೊಸದಿಲ್ಲಿ,ನ.30: ರಾಜ್ಯಸಭೆಯ 12 ಪ್ರತಿಪಕ್ಷ ಸಂಸದರ ಅಮಾನತನ್ನು ಪ್ರತಿಭಟಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷದ ಸದಸ್ಯರು ಮಂಗಳವಾರ ಸಂಸತ್ತಿನ ಉಭಯ ಸದನಗಳಲ್ಲಿ ಸಭಾತ್ಯಾಗವನ್ನು ಮಾಡಿದರು ಮತ್ತು ಕ್ಷಮೆಯನ್ನು ಕೋರುವಂತೆ ಸಭಾಪತಿಗಳು ಸೂಚಿಸಿದ ಬಳಿಕ ರಾಜ್ಯಸಭೆಯಲ್ಲಿ ದಿನದ ಕಲಾಪಗಳನ್ನು ಬಹಿಷ್ಕರಿಸಿದರು.
ಸಭಾತ್ಯಾಗದ ಬಳಿಕ ಸಂಸತ್ ಸಂಕೀರ್ಣದಲ್ಲಿಯ ಮಹಾತ್ಮಾ ಗಾಂಧಿ ಪುತ್ಥಳಿಯೆದುರು ಸರಕಾರ ಮತ್ತು ಅದರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದ ಪ್ರತಿಪಕ್ಷ ಸಂಸದರು,ಈ ವಿಷಯದಲ್ಲಿ ಧ್ವನಿಯೆತ್ತುವುದನ್ನು ತಾವು ಮುಂದುವರಿಸುತ್ತೇವೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದ ಎಂಟು ಪ್ರತಿಪಕ್ಷ ನಾಯಕರು ಅಮಾನತನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದರು.
ಸದನದ ಸೂಕ್ತ ಕಾರ್ಯನಿರ್ವಹಣೆ ಮತ್ತು ತಮ್ಮ ದುರ್ವರ್ತನೆಗಾಗಿ ಅವರಿಂದ ಕ್ಷಮಾಯಾಚನೆ ಹೊರತು ಅದು ಸಾಧ್ಯವಾಗದಿರಬಹುದು ಎಂದು ನಾಯ್ಡು ಪ್ರತಿಪಕ್ಷ ನಾಯಕರಿಗೆ ತಿಳಿಸಿದ್ದಾಗಿ ಬಲ್ಲ ಮೂಲಗಳು ತಿಳಿಸಿದವು.
‘ಯಾವುದಕ್ಕೆ ಕ್ಷಮೆ? ಸಂಸತ್ತಿನಲ್ಲಿ ಜನತೆಯ ವಿಷಯಗಳನ್ನು ಎತ್ತಿದ್ದಕ್ಕಾಗಿಯೇ? ಎಂದಿಗೂ ಸಾಧ್ಯವಿಲ್ಲ ’ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ನಲ್ಲಿ ಘೋಷಿಸಿದ್ದಾರೆ.
ಅಮಾನತನ್ನು ಹಿಂದೆಗೆದುಕೊಳ್ಳಬೇಕೆಂಬ ತಮ್ಮ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಪ್ರತಿಭಟನೆಯಾಗಿ ರಾಜ್ಯಸಭೆಯ ದಿನದ ಕಲಾಪಗಳನ್ನು ಬಹಿಷ್ಕರಿಸಲು ಪ್ರತಿಪಕ್ಷ ಸದಸ್ಯರು ನಿರ್ಧರಿಸಿದರು. ಆದಾಗ್ಯೂ ಲೋಕಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷವು ಚರ್ಚೆಗಳಲ್ಲಿ ಭಾಗವಹಿಸಲು ನಿರ್ಧರಿಸಿತು.
ಸೋಮವಾರ ಇಡೀ ಚಳಿಗಾಲದ ಅಧಿವೇಶನದ ಅವಧಿಗೆ ಅಮಾನತುಗೊಂಡಿರುವ 12 ಸಂಸದರಲ್ಲಿ ಕಾಂಗ್ರೆಸ್ನ ಆರು,ಟಿಎಂಸಿ ಮತ್ತು ಶಿವಸೇನೆಯ ತಲಾ ಇಬ್ಬರು ಹಾಗೂ ಸಿಪಿಎಂ ಮತ್ತು ಸಿಪಿಐನ ತಲಾ ಓರ್ವರು ಸೇರಿದ್ದಾರೆ.
ಲೋಕಸಭೆಯಲ್ಲಿ ಟಿಎಂಸಿ ಸದಸ್ಯರು ಪ್ರತಿಭಟನೆ ಅಥವಾ ಸಭಾತ್ಯಾಗದಲ್ಲಿ ಭಾಗಿಯಾಗಿರಲಿಲ್ಲ. ರಾಜ್ಯಸಭೆಯಲ್ಲಿ ಪಕ್ಷದ ಸದಸ್ಯರು ಇತರ ಪ್ರತಿಪಕ್ಷ ಸದಸ್ಯರ ಸಭಾತ್ಯಾಗದ ಸ್ವಲ್ಪ ಹೊತ್ತಿನ ಬಳಿಕ ತಾವೂ ಸದನದಿಂದ ನಿರ್ಗಮಿಸಿದರು.
ಪ್ರತಿಪಕ್ಷ ಸದಸ್ಯರನ್ನಲ್ಲ,ಹಿಂದಿನ ಮಳೆಗಾಲದ ಅಧಿವೇಶನದಲ್ಲಿ ಕೆಲವು ಚರ್ಚೆಗಳಿಗೆ ತಡೆಯನ್ನೊಡ್ಡಿದ್ದ ಆಡಳಿತ ಪಕ್ಷದ 80 ಸಂಸದರನ್ನು ಅಮಾನತುಗೊಳಿಸಬೇಕು ಎಂದು ಟಿಎಂಸಿ ನಾಯಕ ಡೆರೆಕ್ ಒ’ಬ್ರಿಯಾನ್ ಹೇಳಿದರು. ಪಕ್ಷವು ಬುಧವಾರದಿಂದ ತನ್ನ ಪ್ರತಿಭಟನೆಯನ್ನು ನಡೆಸಲಿದೆ ಎಂದು ಟ್ವೀಟಿಸಿರುವ ಅವರು,ರಾಜ್ಯಸಭೆಯಿಂದ ಅಮಾನತುಗೊಂಡಿರುವ 12 ಪ್ರತಿಪಕ್ಷ ಸಂಸದರು ಡಿ.1ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಸಂಸತ್ತಿನ ಮಹಾತ್ಮಾ ಗಾಂಧಿ ಪುತ್ಥಳಿಯೆದುರು ಧರಣಿ ಕುಳಿತುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಅಮಾನತು ವಿಷಯದ ಬಗ್ಗೆ ಮಾತನಾಡಿದ ಹಲವಾರು ಕಾಂಗ್ರೆಸ್ ನಾಯಕರು,ಈ ಕ್ರಮವು ಸದನದ ನಿಯಮಗಳು ಮತ್ತು ಪದ್ಧತಿಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು.
ಸರಕಾರವು ಪ್ರತಿಪಕ್ಷಗಳ ವಿರುದ್ಧ ಸಂಘರ್ಷದ ಹಾದಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್,ಸದನದ ಸುಗಮ ನಿರ್ವಹಣೆಯಲ್ಲಿ ಸಹಕಾರದ ಮಾತು ತೋರಿಕೆಯದಾಗಿದೆ ಎಂದು ಹೇಳಿದೆ.
‘ಸಂಸದರ ಅಮಾನತನ್ನು ನಾವು ವಿರೋಧಿಸಿದ್ದೇವೆ ಹಾಗೂ ಸೋನಿಯಾ ಗಾಂಧಿ ಮತ್ತು ಟಿ.ಆರ್.ಬಾಲು ನೇತೃತ್ವದಲ್ಲಿ ಲೋಕಸಭೆಯಲ್ಲಿ ಸಭಾತ್ಯಾಗವನ್ನು ನಡೆಸಿದ್ದೇವೆ. 12 ಸಂಸದರನ್ನು ಅಮಾನತುಗೊಳಿಸುವ ಮೂಲಕ ರಾಜ್ಯಸಭೆಯಲ್ಲಿ ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ಮತ್ತು ಸರಕಾರದ ಇಂತಹ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲು ನಾವು ನಿರ್ಧರಿಸಿದ್ದೇವೆ ’ಎಂದು ಸಭಾತ್ಯಾಗದ ಬಳಿಕ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಆಧಿರ ರಂಜನ್ ಚೌಧುರಿ ಅವರು ಸುದ್ದಿಗಾರರಿಗೆ ತಿಳಿಸಿದರು.
‘ಈ ಸರಕಾರವು ಪ್ರತಿಪಕ್ಷ ಸಂಸದರಿಗೆ ಸದನದಲ್ಲಿ ಮಾತನಾಡಲು ಅವಕಾಶವನ್ನು ನೀಡುತ್ತಿಲ್ಲ. ಸರಕಾರವು ರಾಜ್ಯಸಭೆಯ ಪ್ರತಿಪಕ್ಷ ಸದಸ್ಯರನ್ನು ಅಮಾನತುಗೊಳಿಸುವ ಮೂಲಕ ನಮ್ಮನ್ನು ಬೆದರಿಸಲು ಮತ್ತು ನಮ್ಮ ಧ್ವನಿಯನ್ನಡಗಿಸಲು ಬಯಸುತ್ತಿದೆ ’ ಎಂದರು.
‘ಅಮಾನತನ್ನು ಹಿಂದೆಗೆದುಕೊಳ್ಳುವಂತೆ ನಾವು ಸಭಾಪತಿಗಳನ್ನು ಆಗ್ರಹಿಸಿದ್ದೇವೆ ಮತ್ತು ಪ್ರತಿಪಕ್ಷ ಪ್ರತಿಭಟನೆಯು ಮುಂದುವರಿಯಲಿದೆ. ಕಳೆದ ಅಧಿವೇಶನದಲ್ಲಿ ನಡೆದಿದ್ದರ ಕುರಿತು ಸದಸ್ಯರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲು ನಿಯಮಗಳು ಅವಕಾಶ ನೀಡುವುದಿಲ್ಲ’ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಆನಂದ ಶರ್ಮಾ ಹೇಳಿದರು.
ಕಾಂಗ್ರೆಸ್ನ ಛಾಯಾ ವರ್ಮಾ,ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಮತ್ತು ಟಿಎಂಸಿಯ ಡೋಲಾ ಸೇನ್ ಸೇರಿದಂತೆ 12 ಸಂಸದರನ್ನು ಹಿಂದಿನ ಅಧಿವೇಶನದಲ್ಲಿ ತಮ್ಮ ದುರ್ವರ್ತನೆ ಮತ್ತು ಅಶಿಸ್ತಿನ ನಡವಳಿಕೆಗಾಗಿ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಂಡಿದ್ದಾರೆ.