ಪಂಜಾಬ್ ಮುಖ್ಯಮಂತ್ರಿಯಾಗಲು ಚನ್ನಿ ನನ್ನ ಬೆನ್ನಿಗೆ ಚೂರಿ ಹಾಕಲು ಯತ್ನಿಸಿದ್ದಾರೆ: ಅಮರಿಂದರ್ ಸಿಂಗ್ ಆರೋಪ

ಹೊಸದಿಲ್ಲಿ: ಚರಂಜಿತ್ ಸಿಂಗ್ ಚನ್ನಿ "ನನ್ನ ಬೆನ್ನಿಗೆ ಚೂರಿ ಹಾಕಲು ಪ್ರಯತ್ನಿಸಿದರು" ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ತಮ್ಮ ಉತ್ತರಾಧಿಕಾರಿ ವಿರುದ್ಧ ಆರೋಪ ಮಾಡಿದ್ದಾರೆ.
ಕಾಂಗ್ರೆಸ್‌ನಿಂದ ಬೇರ್ಪಟ್ಟ ಬಳಿಕ ತಮ್ಮದೇ ಪಕ್ಷವನ್ನು ಸ್ಥಾಪಿಸಿರುವ ಅಮರಿಂದರ್ ಸಿಂಗ್, “ಚನ್ನಿ ದಕ್ಷ ನಾಯಕನಲ್ಲ ಹಾಗೂ ಆತನಿಗೆ ನನ್ನ ಭಯ ಇದೆ" ಎಂದು ಹೇಳಿದರು.
"ಚನ್ನಿ ಅವರು ಏನು ಬೇಕಾದರೂ ಹೇಳಬಹುದು, ಅವರು ನನಗೆ ಭಯಪಡುತ್ತಾರೆ. ಅವರು ಮುಖ್ಯಮಂತ್ರಿಯಾಗಲು ನನ್ನ ಬೆನ್ನಿಗೆ ಚೂರಿ ಹಾಕಲು ಪ್ರಯತ್ನಿಸಿದರು" ಎಂದು ಅಮರಿಂದರ್ ಸಿಂಗ್ ಇಂದು NDTV ಗೆ ತಿಳಿಸಿದರು.
"ಅವರು(ಚನ್ನಿ) ತಮ್ಮ ಕೆಲಸವನ್ನು ಮಾಡುತ್ತಿಲ್ಲ, ಅವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ನಾನು ಕನಿಷ್ಠ 14 ಪ್ರಧಾನ ಕಾರ್ಯದರ್ಶಿಗಳೊಂದಿಗೆ ವ್ಯವಹರಿಸಿದ್ದೇನೆ. ಈ ವ್ಯಕ್ತಿಗೆ (ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ಚೌಧರಿ) ಕುಳಿತುಕೊಳ್ಳಲು ಹಕ್ಕಿಲ್ಲದ ಸಭೆಯಲ್ಲೂ ಇರುತ್ತಾರೆ. ಚೌಧರಿ ಪಂಜಾಬ್ ಸರಕಾರವನ್ನು ನಡೆಸುತ್ತಿದ್ದಾರೆ ಹೊರತು ಚನ್ನಿ ಅಲ್ಲ" ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.





