ಒಮೈಕ್ರಾನ್ ಇದುವರೆಗೆ ವರದಿಯಾಗಿಲ್ಲ: ಸಂಸತ್ತಿಗೆ ತಿಳಿಸಿದ ಸರಕಾರ

ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ
ಹೊಸದಿಲ್ಲಿ, ನ. 30: ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಹಾಗೂ ಬ್ರಿಟನ್, ಜರ್ಮನಿ, ಜಪಾನ್ ಹಾಗೂ ಹಾಂಗ್ಕಾಂಗ್ ಸೇರಿದಂತೆ 12ಕ್ಕೂ ಅಧಿಕ ರಾಷ್ಟ್ರಗಳಲ್ಲಿ ವರದಿಯಾಗಿರುವ ಕೋವಿಡ್ನ ರೂಪಾಂತರಿತ ಪ್ರಬೇಧ ಒಮೈಕ್ರಾನ್ನ ಪ್ರಕರಣಗಳು ಭಾರತದಲ್ಲಿ ಇದುವರೆಗೆ ವರದಿಯಾಗಿಲ್ಲ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಅವರು ಹೇಳಿದ್ದಾರೆ.
‘‘ಕೋವಿಡ್ನ ಪ್ರಬೇಧ ಒಮೈಕ್ರಾನ್ ಪ್ರಕರಣ ಭಾರತದಲ್ಲಿ ಇದುವರೆಗೆ ಪತ್ತೆಯಾಗಿಲ್ಲ’’ ಎಂದು ಮಾಂಡವಿಯ ಅವರು ರಾಜ್ಯಸಭೆಗೆ ತಿಳಿಸಿದರು. ‘‘ನಾವು ಸಂಶಯಾಸ್ಪದ ಪ್ರಕರಣಗಳನ್ನು ಕೂಡಲೇ ಪರಿಶೀಲಿಸುತ್ತಿದ್ದೇವೆ ಹಾಗೂ ಜಿನೋಮ್ ಸೀಕ್ವೆನಿಸ್ಸಿಂಗ್ ನಡೆಸುತ್ತಿದ್ದೇವೆ. ಸಾಂಕ್ರಾಮಿಕ ರೋಗದ ಸಂದರ್ಭ ನಾವು ಸಾಕಷ್ಟು ಕಲಿತಿದ್ದೇವೆ. ಇಂದು ನಮಗೆ ಸಾಕಷ್ಟು ಸಂಪನ್ಮೂಲಗಳು ಹಾಗೂ ಪ್ರಯೋಗಶಾಲೆಗಳು ಇವೆ. ನಾವು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲೆವು’’ ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಐಸಿಎಂಆರ್ನ ಸಾಂಕ್ರಾಮಿಕ ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಮಿರನ್ ಪಾಂಡಾ ಅವರು ಸೋಮವಾರ ಒಮೈಕ್ರಾನ್ ಬಗ್ಗೆ ಎಚ್ಚರಿಕೆ ನೀಡಿದ್ದರು. ‘‘ಒಂದು ವೇಳೆ ಒಮೈಕ್ರಾನ್ ಭಾರತದಲ್ಲಿ ಪತ್ತೆಯಾದರೆ ನನಗೆ ಅಚ್ಚರಿ ಆಗದು. ಒಮೈಕ್ರಾನ್ ಪ್ರಬೇಧ ಅತಿ ವೇಗವಾಗಿ ಹರಡುತ್ತದೆ. ಆದುದರಿಂದ ಅದು ಯಾವಾಗ ಪತ್ತೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದರು.
ಒಮೈಕ್ರಾನ್ ಅಗ್ಗದ ಹಾಗೂ ತ್ವರಿತ ಆ್ಯಂಟೀಜನ್ ಪರೀಕ್ಷೆಗಳು ಸೇರಿದಂತೆ ಈಗ ಅಸ್ತಿತ್ವದಲ್ಲಿರುವ ಪರೀಕ್ಷೆಗಳಲ್ಲಿ ಪತ್ತೆಯಾಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಂಗಳವಾರ ತಿಳಿಸಿದ್ದಾರೆ.
ಅಲ್ಲದೆ, ಒಮೈಕ್ರಾನ್ ಪ್ರಕರಣಗಳನ್ನು ತ್ವರಿತವಾಗಿ ಗುರುತಿಸುವಂತೆ ಹಾಗೂ ನಿರ್ವಹಿಸುವಂತೆ ಆಗ್ರಹಿಸಿದ್ದಾರೆ. ಆರೋಗ್ಯ ಮೂಲ ಸೌಕರ್ಯ, ಮನೆ ಐಸೋಲೇಶನ್ ಅನ್ನು ಹೆಚ್ಚಿಸುವಂತೆ ಹಾಗೂ ಕಂಟೈನ್ಮೆಂಟ್, ನಿಗಾ ಹಾಗೂ ಲಸಿಕೆ ನೀಡಿಕೆಯನ್ನು ಹೆಚ್ಚಿಸುವ ಬಗ್ಗೆ ಗಮನ ಕೇಂದ್ರೀಕರಿಸುವಂತೆ ಸೂಚಿಸಿದ್ದಾರೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಣ್ಗಾವರಲು ಸಡಿಲಗೊಳಿಸದಂತೆ ಸಲಹೆ ನೀಡಲಾಗಿದೆ ಹಾಗೂ ಸರಕಾರದ ಮಂತ್ರವಾದ ‘ಪರೀಕ್ಷೆ, ಪತ್ತೆ, ಚಿಕಿತ್ಸೆ ಹಾಗೂ ಲಸಿಕೆ’ಯನ್ನು ನೆನಪಿಸಲಾಗಿದೆ. ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಹಾಟ್ಸ್ಪಾಟ್ಗಳ ಬಗ್ಗೆ ಗಮನ ಕೇಂದ್ರೀಕರಿಸುವಂತೆ ಕೂಡ ಸಲಹೆ ನೀಡಲಾಗಿದೆ.