ಚಾರ್ಧಾಮ ಕಾನೂನು ರದ್ದು : ದೇವಾಲಯ ಮತ್ತೆ ಅರ್ಚಕರ ನಿಯಂತ್ರಣಕ್ಕೆ

ಪುಷ್ಕರ್ ಸಿಂಗ್ ಧಾಮಿ (Photo - PTI)
ಡೆಹ್ರಾಡೂನ್: ಗಂಗೋತ್ರಿ, ಯಮುನೋತ್ರಿ, ಬದರಿನಾಥ ಮತ್ತು ಕೇದಾರನಾಥದ 50ಕ್ಕೂ ಹೆಚ್ಚು ದೇವಾಲಯಗಳನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆಯಲು ಅನುವು ಮಾಡಿಕೊಟ್ಟಿದ್ದ ಚಾರ್ಧಾಮ ದೇವಸ್ಥಾನಂ ಮಂಡಳಿ ಕಾಯ್ದೆಯನ್ನು ರದ್ದುಪಡಿಸಿ ರುವುದಾಗಿ ಉತ್ತರಾಖಂಡ ಸರ್ಕಾರ ಮಂಗಳವಾರ ಪ್ರಕಟಿಸಿದೆ.
ಈ ಕಾಯ್ದೆಯ ಅನ್ವಯ, ಮಾತಾ ವೈಷ್ಣೋದೇವಿ ಮಂದಿರ ಮಂಡಳಿಯ ಮಾದರಿಯಲ್ಲಿ ಐಎಎಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಚಾರ್ಧಾಮ ದೇವಸ್ಥಾನಂ ನಿರ್ವಹಣೆ ಮಂಡಳಿ ರಚಿಸಲು ಅವಕಾಶ ಮಾಡಿಕೊಟ್ಟಿತ್ತು. ಈ ಪ್ರಸ್ತಾವಕ್ಕೆ ಚಾರ್ಧಾಮ ಮಂದಿರಗಳ ಅರ್ಚಕರು ತೀವ್ರ ವಿರೋಧ ವ್ಯಕ್ತಪಡಿಸಿ, ಇದು ದೇವಸ್ಥಾನದ ಆಡಳಿತ ವಿಚಾರದಲ್ಲಿ ಶತಮಾನಗಳಿಂದ ಹೊಂದಿರುವ ಹಕ್ಕುಗಳ ನಿರಾಕರಣೆ ಎಂದು ಆಕ್ಷೇಪಿಸಿದ್ದರು.
ಈ ಕಾಯ್ದೆ ರದ್ದುಪಡಿಸುವ ಘೋಷಣೆ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ, "ನಾವು ರಚಿಸಿದ ಎರಡು ಸಮಿತಿಗಳು ನೀಡಿದ ವರದಿಯ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಬಂಧಪಟ್ಟ ಹಕ್ಕುದಾರರ ಜತೆ ಚರ್ಚಿಸಿದ ಸಮಿತಿ, ಕಾಯ್ದೆ ರದ್ದುಪಡಿಸುವಂತೆ ಶಿಫಾರಸ್ಸು ಮಾಡಿದೆ. ಸಾಮಾಜಿಕ ಸಂಘಟನೆಗಳು, ಅರ್ಚಕರು ಹಾಗೂ ಸಮಾಜದ ವಿವಿಧ ವರ್ಗದವರ ಸಲಹೆ ಪಡೆಯಲಾಗಿದೆ. ಭವಿಷ್ಯದಲ್ಲಿ ಈ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದರೆ, ಪ್ರತಿಯೊಂದು ವರ್ಗದ ಅಭಿಪ್ರಾಯವನ್ನೂ ಪಡೆಯಲಾಗುವುದು" ಎಂದು ಸ್ಪಷ್ಟಪಡಿಸಿದರು.
ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ಚಾರ್ಧಾಮ ದೇವಸ್ಥಾನಂ ನಿರ್ವಹಣಾ ಮಂಡಳಿ ಮಸೂದೆಯನ್ನು ಮಂಡಿಸಿದ್ದರು. ದೇವಾಲಯಗಳು ಸ್ವೀಕರಿಸಿದ ನಿಧಿಗಳನ್ನು ನಿರ್ವಹಿಸುವ ಹೊಣೆಯನ್ನು ಮಂಡಳಿಗೆ ನೀಡಲಾಗಿತ್ತು. ಜತೆಗೆ ತೀರ್ಥಯಾತ್ರೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಹಾಗೂ ಚಾರ್ಧಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಹೊಣೆಯನ್ನು ಮಂಡಳಿಗೆ ವಹಿಸಲಾಗಿತ್ತು. ಉನ್ನತ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳನ್ನು ಮಂಡಳಿಯ ಸದಸ್ಯರನ್ನಾಗಿ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಕ್ಷೇತ್ರದ ತೀರ್ಥಪುರೋಹಿತರನ್ನು ಹೊರಗಿಡಲು ಉದ್ದೇಶಿಸಲಾಗಿತ್ತು ಎಂದು ಅರ್ಚಕರು ಹೇಳಿದ್ದಾರೆ.
ಈ ಮಂಡಳಿ ರಚನೆಯಾದ ತಕ್ಷಣ ಅರ್ಚಕರು ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ಮುಖಂಡರು ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸಿದ್ದರು.