ತಲಪಾಡಿ; ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ದೂರು
ಉಳ್ಳಾಲ: ತಲಪಾಡಿ ಚೆಕ್ ಪೋಸ್ಟ್ ಕಡೆಯಿಂದ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಸ್ಕೂಟರ್ ಸವಾರನೋರ್ವ ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ಆಧಾರದಲ್ಲಿ ಆರೋಪಿಯ ಶೋಧ ನಡೆಸುತ್ತಿದ್ದಾರೆ.
ಘಟನೆ ವಿವರ
ತಲಪಾಡಿ ಅಲಂಕಾರ ಗುಡ್ಡೆಯಿಂದ 14ರ ಹರೆಯದ ವಿದ್ಯಾರ್ಥಿನಿ ತನ್ನ ತಂಗಿಯೊಂದಿಗೆ ತಲಪಾಡಿ ಚೆಕ್ ಪೋಸ್ಟ್ ದಾರಿಯಾಗಿ ಶಾಲೆಗೆ ನಡೆದು ಕೊಂಡು ಹೋಗುತ್ತಿದ್ದಳು. ಈ ವೇಳೆ ಸ್ಕೂಟರ್ ನಲ್ಲಿ ಬಂದ ವ್ಯಕ್ತಿಯೋರ್ವ ಬಾಲಕಿಯ ಕೈ ಎಳೆದು ಲೈಂಗಿಕ ಕಿರುಕುಳ ನೀಡಿದ್ದು, ಇದರಿಂದ ಹೆದರಿದ ಬಾಲಕಿ ಬೊಬ್ಬೆ ಹೊಡೆದಿದ್ದಾಳೆ. ಈಕೆಯ ಬೊಬ್ಬೆಗೆ ಜನ ಸೇರಿದ ಸಂದರ್ಭ ಆತ ಅಲ್ಲಿಂದ ಸ್ಕೂಟರ್ ಸಮೇತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಹೆದರಿದ ವಿದ್ಯಾರ್ಥಿನಿ ಸೇರಿದ ಸ್ಥಳೀಯರಲ್ಲಿ ವಿಚಾರ ತಿಳಿಸಿದ್ದಾಳೆ. ರಸ್ತೆಯಲ್ಲಿದ್ದ ಸಿಸಿಟಿವಿ ಫೂಟೇಜ್ ನಲ್ಲಿ ಆರೋಪಿ ಸ್ಕೂಟರಲ್ಲಿ ತೆರಳುತ್ತಿರುವ ದೃಶ್ಯ ದಾಖಲಾಗಿದೆ. ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸಂದೀಪ್ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ಫೂಟೇಜ್ ಆಧಾರದಲ್ಲಿ ಆರೋಪಿಯ ಶೋಧ ಕಾರ್ಯ ನಡೆಸುತ್ತಿದ್ದಾರೆ.