ಯುಪಿಎ ಅಂದರೆ ಏನು?,ಯುಪಿಎ ಅನ್ನುವುದೇ ಇಲ್ಲ: ಶರದ್ ಪವಾರ್ ಭೇಟಿ ಬಳಿಕ ಮಮತಾ ಬ್ಯಾನರ್ಜಿ ಹೇಳಿಕೆ

Photo: Twitter/ @PawarSpeaks
ಮುಂಬೈ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಮುಖ್ಯಸ್ಥ ಶರದ್ ಪವಾರ್ ಅವರು ಇಂದು ಮಧ್ಯಾಹ್ನ ಭೇಟಿಯಾದರು. ಯುಪಿಎ ಎಂದರೇನು, ಯುಪಿಎ ಇಲ್ಲ ಎಂದು ಮಮತಾ ಬ್ಯಾನರ್ಜಿ ಇದೇ ವೇಳೆ ಹೇಳಿಕೆ ನೀಡುವ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಸುಳಿವನ್ನು ನೀಡಿದ್ದಾರೆ.
ಸಭೆಯ ಫೋಟೋಗಳನ್ನು ಟ್ವೀಟ್ ಮಾಡಿರುವ ಪವಾರ್ "ನನ್ನ ಮುಂಬೈ ನಿವಾಸದಲ್ಲಿ ಪಶ್ಚಿಮ ಬಂಗಾಳದ ಗೌರವಾನ್ವಿತ ಸಿಎಂ ಮಮತಾ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ನಾವು ವಿವಿಧ ವಿಷಯಗಳನ್ನು ಚರ್ಚಿಸಿದ್ದೇವೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡುವ ಹಾಗೂ ನಮ್ಮ ಜನರ ಉತ್ತಮತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನಗಳು ಮತ್ತು ಬದ್ಧತೆಯನ್ನು ಬಲಪಡಿಸುವ ಅಗತ್ಯವನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಬರೆದಿದ್ದಾರೆ.
ನಿನ್ನೆ ಸಂಜೆ ಮಮತಾ ಬ್ಯಾನರ್ಜಿ ಅವರು ಶಿವಸೇನೆಯ ಆದಿತ್ಯ ಠಾಕ್ರೆ ಹಾಗೂ ಸಂಜಯ್ ರಾವತ್ ಅವರನ್ನು ಭೇಟಿಯಾದರು. ಉದ್ಧವ್ ಠಾಕ್ರೆ ಅವರೊಂದಿಗಿನ ಅವರ ಭೇಟಿಯು ನಡೆಯಲಿಲ್ಲ, ಏಕೆಂದರೆ ಮುಖ್ಯಮಂತ್ರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಹಾಗೂ ಪ್ರತ್ಯೇಕವಾಗಿರಲು ಸಲಹೆ ನೀಡಲಾಗಿದೆ.