ಹತ್ಯೆ ಸಂಚು ಪ್ರಕರಣ: ಸಮಗ್ರ ತನಿಖೆಗೆ ಆಗ್ರಹಿಸಿ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದ್ದೇನು?

ಸುದ್ದಿಗೋಷ್ಠಿ ನಡೆಸಿದ ಶಾಸಕ ಎಸ್.ಆರ್ .ವಿಶ್ವನಾಥ್
ಬೆಂಗಳೂರು: ತಮ್ಮನ್ನು ಹತ್ಯೆ ಮಾಡಲು ಸಂಚು ರೂಪಿಸಿರುವಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಯಲಹಂಕದ ಬಿಜೆಪಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್ .ವಿಶ್ವನಾಥ್ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಹತ್ಯೆ ಸಂಚಿನ ವಿಚಾರ ಬಹಿರಂಗವಾದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಮುಖಂಡನಾಗಿರುವ ಗೋಪಾಲಕೃಷ್ಣ ಈ ಹಿಂದೆ ನನ್ನ ವಿರುದ್ಧ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದು ಸೋಲನುಭವಿಸಿದ್ದರು. ರಾಜಕೀಯ ದ್ವೇಷದಿಂದ ನನ್ನ ಕೊಲೆಗೆ ಸಂಚು ರೂಪಿಸಿರಬೇಕು ಎಂದರು.
ಮಂಗಳವಾರ ಸಂಜೆ ಯಲಹಂಕದಲ್ಲಿರುವ ನನ್ನ ಗೃಹ ಕಚೇರಿಗೆ ಒಂದು ಪತ್ರ ಬಂದಿತ್ತು. ಅದು ಕುಳ್ಳ ದೇವರಾಜ್ ಬರೆದಿದ್ದ ಕ್ಷಮಾಪಣ ಪತ್ರವಾಗಿತ್ತು. ಯಲಹಂಕ ಶಾಸಕ ವಿಶ್ವನಾಥ್ ಅವರನ್ನು ಕೊಲೆ ಮಾಡದಿದ್ದರೆ ನಿನ್ನನ್ನು ಮತ್ತು ವಿಶ್ವನಾಥ್ ಅವರನ್ನು ಕೊಲೆ ಮಾಡುವುದಾಗಿ ಗೋಪಾಲಕೃಷ್ಣ ಬೆದರಿಕೆ ಹಾಕಿದ್ದಾರೆ. ನಾನು ಆರ್ಥಿಕ ಮುಗ್ಗಟ್ಟಿನಿಂದ ಗೋಪಾಲಕೃಷ್ಣ ಜೊತೆ ಕೈಜೋಡಿಸಿದ್ದು ತಪ್ಪಾಗಿದೆ. ದಯಮಾಡಿ ನನ್ನನ್ನು ಕ್ಷಮಿಸಿ ಎಂದು ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದ ಪ್ರತಿಗಳನ್ನು ಅಪರಿಚಿತರ ಮೂಲಕ ನನ್ನ ಕಚೇರಿಗೆ ತಲುಪಿಸಿದ್ದ ಎಂದು ಹೇಳಿದರು.
ನಾನು ಸದಾ ಒಬ್ಬಂಟಿಯಾಗಿಯೇ ಓಡಾಡುತ್ತೇನೆ. ಪ್ರವಾಸ ಮಾಡುತ್ತಿರುತ್ತೇನೆ. ನನ್ನ ವಾಹನ ಚಾಲಕ ಮತ್ತು ಅಂಗರಕ್ಷಕನೊಬ್ಬನ್ನನ್ನು ಬಿಟ್ಟರೆ ನನಗೆ ಯಾವುದೇ ಭದ್ರತೆ ಇಲ್ಲ. ಧೈರ್ಯವಾಗಿ ಓಡಾಡುತ್ತಿರುತ್ತೇನೆ. ಇಂತಹ ಸಂದರ್ಭದಲ್ಲಿ ನನ್ನ ವಿರುದ್ಧ ಏನೋ ಷಡ್ಯಂತ್ರ ನಡೆಯುತ್ತಿದೆ ಎಂಬ ಅನುಮಾನ ಹಲವು ದಿನಗಳ ಹಿಂದೆಯೇ ಬಂದಿತ್ತು. ಆದರೆ, ನನ್ನ ಕೊಲೆಗೇ ಸಂಚು ನಡೆಯುತ್ತಿದೆ ಎಂಬುದು ಮಾತ್ರ ತಿಳಿದಿರಲಿಲ್ಲ. ಹಾಗೊಂದು ವೇಳೆ ಇದ್ದಿದ್ದರೆ ನಾವು ಎಚ್ಚೆತ್ತುಕೊಳ್ಳುತ್ತಿದ್ದೆ ಎಂದರು.
ಆಂಧ್ರದ ಹಂತಕರಿಗೆ ಸುಪಾರಿ
ಕಡಪ ಮತ್ತು ಆಂಧ್ರ ಪ್ರದೇಶದಿಂದ ಕೊಲೆಗಡುಕರಿಗೆ ಸುಪಾರಿ ನೀಡಿ ವಿಶ್ವನಾಥ್ ಅವರನ್ನು ಕೊಲೆ ಮಾಡಿಸುವುದಾಗಿ ಗೋಪಾಲಕೃಷ್ಣ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ದೇವರಾಜ್ ತಪ್ಪೊಪ್ಪಿಗೆ ಪತ್ರದಲ್ಲಿ ಹೇಳಿಕೊಂಡಿದ್ದಾರೆ ಎಂದು ವಿಶ್ವನಾಥ್ ತಿಳಿಸಿದರು.
ಈ ಹಿಂದೆ ಕಡಬಗೆರೆ ಶೀನನ ಮೇಲೆ ನಡೆದ ಶೂಟೌಟ್ ಪ್ರಕರಣದಲ್ಲಿ ಇದೇ ಗೋಪಾಠಲಕೃಷ್ಣ ಶೀನನಿಂದ ಬಲವಂತದಿಂದ ನನ್ನ ಹೆಸರನ್ನು ಹೇಳಿಸಿದ್ದರು. ಈ ರೀತಿ ನನ್ನ ವಿರುದ್ಧ ವಿನಾ ಕಾರಣ ರಾಜಕೀಯ ದ್ವೇಷ ಮಾಡುತ್ತಿದ್ದಾರೆ. ಇಂತಹ ರಾಜಕೀಯ ಮಾಡುವ ಬದಲು ಚುನಾವಣೆಯನ್ನು ಎದುರಿಸಲಿ ಎಂದು ವಿಶ್ವನಾಥ್ ಸವಾಲು ಹಾಕಿದರು.
ಕುಳ್ಳ ದೇವರಾಜ್ ಜೊತೆ ಸಂಬಂಧವಿಲ್ಲ. ಕುಳ್ಳ ದೇವರಾಜ್ ಕಾಂಗ್ರೆಸ್ ಕಾರ್ಯಕರ್ತ. ನನಗೆ ಎಲ್ಲಾ ಪಕ್ಷದಲ್ಲಿಯೂ ಸ್ನೇಹಿತರಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಡೆಯುವ ಸಮುದಾಯಗಳ ಕಾರ್ಯಕ್ರಮಗಳಲ್ಲಿ ಎಲ್ಲಾ ಪಕ್ಷದ ಮುಖಂಡರೂ ಪಾಲ್ಗೊಳ್ಳುತ್ತಾರೆ. ಜೊತೆಗೆ ಫೋಟೋ ತೆಗೆಸಿಕೊಳ್ಳುತ್ತೇವೆ. ಹಾಗಂತ ನನಗೂ ದೇವರಾಜ್ ಗೂ ಯಾವುದೇ ಸಂಬಂಧವಿಲ್ಲ. ಪರಿಚಯವಿದೆಯಾದರೂ ಆತನೊಂದಿಗೆ ಯಾವುದೇ ವ್ಯವಹಾರವನ್ನು ಇಟ್ಟುಕೊಂಡಿಲ್ಲ. ಅಂತಹ ಅಗತ್ಯವೂ ನನಗಿಲ್ಲ ಎಂದರು.
ಪೊಲೀಸರಿಗೆ ದೂರು
ಈ ಹತ್ಯೆ ಸಂಚಿನ ವಿರುದ್ಧ ನಾನು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೂ ಮಾಹಿತಿ ನೀಡಿದ್ದೇನೆ. ಪ್ರಕರಣದ ನಿಷ್ಪಕ್ಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ವಿಶ್ವನಾಥ್ ತಿಳಿಸಿದರು.
ಡಿಕೆಶಿ ಸಾಧು ಸಂತರ ಜೊತೆಯಲ್ಲಿದ್ದಾರಾ?
ನಾನು ರೌಡಿಗಳನ್ನಿಟ್ಟುಕೊಂಡು ಓಡಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹಾಗಾದರೆ ಡಿ.ಕೆ.ಶಿವಕುಮಾರ್ ಅವರು ಸಾಧು ಸಂತರ ಜೊತೆಯಲ್ಲಿ ಓಡಾಡುತ್ತಿದ್ದಾರಾ? ಅವರ ಹಿನ್ನೆಲೆ ಏನೆಂದು ಎಲ್ಲರಿಗೂ ತಿಳಿದಿದೆ. ಅವರು ಹತ್ಯೆ ಸಂಚಿನಂತಹ ಪ್ರಕರಣದಲ್ಲಿ ನನ್ನ ಪರವಾಗಿ ನಿಲ್ಲುವ ಬದಲು ಸಂಚು ರೂಪಿಸಿದವರ ಪರವಾಗಿ ಮಾತನಾಡಿರುವುದು ಸರಿಯಲ್ಲ ಎಂದರು.
ಈ ಹಿಂದೆ ತಮ್ಮದೇ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಾಗಲೇ ಡಿ.ಕೆ.ಶಿವಕುಮಾರ್ ಅವರು ಶ್ರೀನಿವಾಸಮೂರ್ತಿ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಇಂತಹ ಶಿವಕುಮಾರ್ ಅವರು ಈ ಪ್ರಕರಣದಲ್ಲಿ ನನ್ನ ಪರವಾಗಿ ನಿಲ್ಲುತ್ತಾರೆ ಎಂಬುದು ದೂರದ ಮಾತು ಎಂದರು.
ಪ್ರಭಾವ ಬೀರಿ ಗೋಪಾಲಕೃಷ್ಣನನ್ನು ಬಿಡಿಸಿದ್ದಾರೆ
ಮಂಗಳವಾರ ಸಿಸಿಬಿಯವರು ಗೋಪಾಲಕೃಷ್ಣನನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಆದರೆ, ರಾತ್ರಿ ವೇಳೆಗೆ ಪ್ರಭಾವಿ ರಾಜಕಾರಣಿಯೊಬ್ಬರು ಧಮ್ಕಿ ಹಾಕಿ ಅವರನ್ನು ಬಿಡಿಸಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದರು.







