ಗೃಹರಕ್ಷಕ ದಳದ ಪಶ್ಚಿಮ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಉಡುಪಿ, ಡಿ.1: ಉಡುಪಿ ಗೃಹ ರಕ್ಷಕ ದಳದ ವತಿಯಿಂದ ಮೂರು ದಿನಗಳ ಕಾಲ ನಗರದ ಚಂದು ಮೈದಾನದಲ್ಲಿ ಆಯೋಜಿಸಲಾದ ಪಶ್ಚಿಮವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಬುಧವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಹೊಸ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯವಾ ಗುತ್ತದೆ. ಕ್ರೀಡಾಪಟುಗಳು ಕ್ರೀಡಾ ಮನೋಭಾವ ಮತ್ತು ಕ್ರೀಡಾಸ್ಪೂರ್ತಿಯಿಂದ ಕ್ರೀಡಾಕೂಟಗಳಲ್ಲಿ ಭಾಗ ವಹಿಸಬೇಕು. ಕ್ರೀಡೆ ಆರೊಗ್ಯದ ದೃಷ್ಠಿಯಿಂದಲೂ ಅತ್ಯಂತ ಉತ್ತಮವಾದುದ. ಕೋವಿಡ್ ನಿಂದ ರಕ್ಷಿಸಿಕೊಳ್ಳಲು ಉತ್ತಮ ಆರೋಗ್ಯ ಹೊಂದುವುದು ಅಗತ್ಯವಾಗಿದೆ. ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಲು ಸಾಧ್ಯವಾಗಲಿದೆ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಮಣಿಪಾಲ ಕೆಎಂಸಿ ಡೀನ್ ಡಾ.ಶರತ್ ಕೆ.ರಾವ್, ಉಡುಪಿ ಅಸೋಸಿಯೇಶನ್ ಆಫ್ ಕನ್ಸ್‌ಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಅಧ್ಯಕ್ಷ ಗೋಪಾಲ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಸಮಾದೇಷ್ಟ ರಮೇಶ್ ಪ್ರಮಾಣ ವಚನ ಬೋಧಿಸಿದರು. ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಸ್ವಾಗತಿಸಿದರು. ಶ್ಯಾಮಲಾ ವಂದಿಸಿ ದರು. ಸಾಯಿನಾಥ್ ಉದ್ಯಾವರ ಮತ್ತು ಲಕ್ಷ್ಮಿನಾರಾಯಣ ರಾವ್ ಕಾರ್ಯ ಕ್ರಮ ನಿರೂಪಿಸಿದರು.
ಕ್ರೀಡಾಕೂಟದಲ್ಲಿ ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಟ್ಟು 140 ಗೃಹರಕ್ಷಕ/ಗೃಹರಕ್ಷಕಿಯರು ಭಾಗವಹಿಸಿದ್ದಾರೆ. ಗೃಹರಕ್ಷಕ ಸಿಬ್ಬಂದಿಯಿಂದ ಆಕರ್ಷಕ ಪೆರೇಡ್ ನಡೆಯಿತು.







