ದ.ಕ.ಜಿಲ್ಲೆಯ ಕೆರೆಗಳ ಒತ್ತುವರಿ ತೆರಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸೂಚನೆ

ಮಂಗಳೂರು, ಡಿ.1: ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳ ತೆರಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ..ವಿ ಸೂಚನೆ ನೀಡಿದ್ದಾರೆ.
ದ.ಕ.ಜಿಲ್ಲೆಯ ಕೆರೆಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ನಿರ್ವಹಣೆಯ ಕುರಿತು ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾಖಲಾತಿಗಳ ಪ್ರಕಾರ ಜಿಲ್ಲೆಯಲ್ಲಿ 644 ಕೆರೆಗಳಿವೆ, ಇನ್ನೂ ಹೆಚ್ಚುವರಿ ಕೆರೆಗಳಿದ್ದಲ್ಲಿ ಆರ್‌ಟಿಸಿಯನ್ನು ತಪಾಸಣೆ ಮಾಡಿ, ಕೂಲಂಕಷವಾಗಿ ಪರಿಶೀಲಿಸಿ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು, ಒತ್ತುವರಿ ತೆರವುಗೊಂಡಿರುವ ಕೆರೆಗಳ ದಂಡೆ ಗಳಲ್ಲಿ ಗಿಡಗಳನ್ನು ನೆಡಬೇಕು, ಅವುಗಳ ಸೌಂದರ್ಯಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಡಿ.31ರೊಳಗೆ ಸೂಕ್ತ ಕ್ರಿಯಯೋಜನೆ ಸಿದ್ಧಪಡಿಸಬೇಕು ಎಂದು ಪಿಡಿಒಗಳಿಗೆ ನಿರ್ದೇಶನ ನೀಡಿದರು.
ಮಂಗಳೂರು ತಾಲೂಕಿನಲ್ಲೇ 306 ಕೆರೆಗಳಿದ್ದು, 140 ಹೆಚ್ಚುವರಿ ಕೆರೆಗಳಿರುವುದಾಗಿ ತಹಶೀಲ್ದಾರ್ ಗುರುಪ್ರಸಾದ್ ಮಾಹಿತಿ ನೀಡಿದ್ದಾರೆ, ಹಾಗಾಗಿ ಭೂದಾಖಲೆಗಳ ಇಲಾಖೆಯ ಉಪ ನಿರ್ದೇಶಕರು ಎಲ್ಲಾ ಕೆರೆಗಳ ಸರ್ವೆಕಾರ್ಯವನ್ನು ಕೈಗೊಳ್ಳಬೇಕು ಮತ್ತು ಅವುಗಳನ್ನು ಆರ್‌ಟಿಸಿ ಮೂಲಕ ಪತ್ತೆ ಮಾಡುವಂತೆ ಡಿಸಿ ಸೂಚಿಸಿದರು.
ಜಿಲ್ಲೆಯ ಎಲ್ಲಾ ಕೆರೆಗಳ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ವಿವರಗಳನ್ನು ನಮೂದಿಸಬೇಕಿದೆ, ಈಗಾಗಲೇ ಜಿಲ್ಲೆಯ ಕೆರೆಗಳ ಹೆಸರು, ಗ್ರಾಮ, ಸರ್ವೆ ನಂ., ಹೋಬಳಿ, ತಾಲೂಕಿನ ವಿವರಗಳನ್ನು ನಮೂನೆಯಲ್ಲಿ ಭರ್ತಿಮಾಡಿ ತಾಲೂಕುವಾರು ಗೂಗಲ್ ಸ್ಪ್ರೆಡ್ ಶೀಟ್ ತಯಾರಿಸಲಾಗುತ್ತಿದೆ ಎಂದು ಸಣ್ಣ ನೀರಾವರಿಇಲಾಖೆಯಕಾರ್ಯಪಾಲಕಅಭಿಯಂತ ಗೋಕುಲ್‌ದಾಸ್ ಸಭೆಗೆ ಮಾಹಿತಿ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಿ ಶ್ರೀಧರ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಸಹಾಯಕ ಆಯುಕ್ತ ಮದನ್ ಮೋಹನ್, ಡಿಡಿಎಲ್‌ಆರ್ ನಿರಂಜನ್, ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು.







