ನಾಳೆ ತಜ್ಞರೊಂದಿಗೆ ಸಭೆ, ಹೊಸ ಮಾರ್ಗಸೂಚಿ ಜಾರಿಗೆ ಕ್ರಮ: ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಒಮೈಕ್ರಾನ್ ಪ್ರಕರಣ ಪತ್ತೆ ಹಿನ್ನೆಲೆ

ಹೊಸದಿಲ್ಲಿ, ಡಿ. 2: ರಾಜ್ಯದಲ್ಲಿ ಎರಡು ಒಮೈಕ್ರಾನ್ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಾಳೆ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಪರಿಣತರೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪತ್ರಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ರಾಜ್ಯದಿಂದ ಎನ್ ಸಿ ಬಿ ಎಸ್ ಗೆ ಕಳುಹಿಸಿದ್ದ ಮಾದರಿಯಲ್ಲಿ ಕೇಂದ್ರ ಸರ್ಕಾರವು ಇಂದು ಎರಡು ಒಮಿಕ್ರಾನ್ ಪ್ರಕರಣಗಳನ್ನು ದೃಢ ಪಡಿಸಿದೆ. ಆದರೆ ವಿವರವಾದ ಪರೀಕ್ಷಾ ವರದಿ ಬಂದಿಲ್ಲ. ಪ್ರಕರಣಗಳ ಸಂಪೂರ್ಣ ವಿವರ ಪಡೆಯುವಂತೆ ರಾಜ್ಯದ ಆರೋಗ್ಯ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದರು.
ನಾಳೆ ಪರಿಣಿತರು ಹಾಗೂ ಹಿರಿಯ ಅಧಿಕಾರಿಗಳ ತುರ್ತು ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಹೊಸ ಹೊಸ ತಳಿಗಳ ಸೋಂಕನ್ನು ನಿಯಂತ್ರಿಸುವ ಕುರಿತು ರಾಜ್ಯ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗುವುದು. ಕೇಂದ್ರದ ಪರಿಣತರ ಜೊತೆಗೂ ಈ ಕುರಿತು ಚರ್ಚಿಸಲಾಗುವುದು ಹಾಗೂ ಹೊಸ ಮಾರ್ಗ ಸೂಚಿಯನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವರನ್ನು ಮತ್ತೊಮ್ಮೆ ಭೇಟಿಯಾಗಿದ್ದೇನೆ. ಈ ಪ್ರಕರಣದ ವಿವರ ಒದಗಿಸುವುದಾಗಿ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಪ್ರಬೇಧದ ಸೋಂಕು ತೀವ್ರ ಸ್ವರೂಪದಲ್ಲ ಎಂದು ತಿಳಿದು ಬಂದಿದೆ ಎಂದು ಅವರು ನುಡಿದರು.