ಸಿಂಧು ನಾಕೌಟ್ ಹಂತಕ್ಕೆ ತೇರ್ಗಡೆ ಶ್ರೀಕಾಂತ್, ಅಶ್ವಿನಿ -ಸಿಕ್ಕಿ ರೆಡ್ಡಿಗೆ ಸೋಲು
ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿ

pv sindhu(photo:PTI)
ಬಾಲಿ, ಡಿ.2 :ಭಾರತದ ಒಲಿಂಪಿಯನ್ ಪಿ.ವಿ. ಸಿಂಧು ಜರ್ಮನಿಯ ಯವೊನ್ ಲಿ ಅವರನ್ನು ನೇರ ಗೇಮ್ಗಳ ಅಂತರದಿಂದ ಸೋಲಿಸಿ ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಾಕೌಟ್ ಹಂತ ತಲುಪಿದ್ದಾರೆ.
ಗುರುವಾರ 31 ನಿಮಿಷಗಳ ಕಾಲ ನಡೆದ ‘ಎ’ ಗುಂಪಿನ ಎರಡನೇ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 26ರ ವಯಸ್ಸಿನ ಸಿಂಧು ವಿಶ್ವದ ನಂ.23ನೇ ಆಟಗಾರ್ತಿಯನ್ನು 21-10, 21-13 ಗೇಮ್ಗಳ ಅಂತರದಿಂದ ಮಣಿಸಿದರು.
ಹಾಲಿ ವಿಶ್ವ ಚಾಂಪಿಯನ್ ಸಿಂಧು ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಥಾಯ್ಲೆಂಡ್ನ ಅಗ್ರ ಶ್ರೇಯಾಂಕದ ಪೋರ್ನ್ ಪಾವಿ ಚೋಚುವೊಂಗ್ರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬಿ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಶ್ರೀಕಾಂತ್ ಮೂರು ಬಾರಿ ಜೂನಿಯರ್ ವಿಶ್ವ ಚಾಂಪಿಯನ್ಆಗಿರುವ ಥಾಯ್ಲೆಂಡ್ನ ಕುನ್ಲವುಟ್ ವಿಟಿಡಸರ್ನ್ ವಿರುದ್ಧ 18-21, 17-21 ಅಂತರದಿಂದ ಸೋತಿದ್ದಾರೆ. ಈ ಸೋಲಿನೊಂದಿಗೆ ಶ್ರೀಕಾಂತ್ ಅವರ ನಾಕೌಟ್ ಹಂತಕ್ಕೇರುವ ಅವಕಾಶ ತೂಗುಯ್ಯಾಲೆಯಲ್ಲಿದೆ. ಶ್ರೀಕಾಂತ್ ಅವರು ವಿಟಿಡಸರ್ನ್ ವಿರುದ್ಧ ಮೂರನೇ ಬಾರಿ ಸೋತಿದ್ದಾರೆ. ಸೆಪ್ಟಂಬರ್ನಲ್ಲಿ ನಡೆದಿದ್ದ ಸುದಿರ್ಮನ್ ಕಪ್ ಹಾಗೂ ಕಳೆದ ವರ್ಷ ನಡೆದಿರುವ ಏಶ್ಯ ಟೀಮ್ ಚಾಂಪಿಯನ್ಶಿಪ್ನಲ್ಲಿ ವಿಟಿಡಸರ್ನ್ಗೆ ಸೋತಿದ್ದರು. ಬಿ ಗುಂಪಿನಲ್ಲಿ ಮಲೇಶ್ಯದ ಲೀ ಝಿಲ್ ಜಿಯಾ 2 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಶ್ರೀಕಾಂತ್ ಹಾಗೂ ವಿಟಿಡಸರ್ನ್ ತಲಾ 1 ಜಯ ಹಾಗೂ ಸೋಲಿನೊಂದಿಗೆ ತಲಾ 1 ಅಂಕ ಹಂಚಿಕೊಂಡಿದ್ದಾರೆ. ಶ್ರೀಕಾಂತ್ ತನ್ನ ಮೂರನೇ ಪಂದ್ಯದಲ್ಲಿ ಲೀ ಝಿ ಜಿಯಾರನ್ನು ಎದುರಿಸಲಿದ್ದಾರೆ. ಅಗ್ರ-2ರಲ್ಲಿ ಸ್ಥಾನ ಪಡೆಯುವ ಆಟಗಾರ ನಾಕೌಟ್ ಹಂತಕ್ಕೇರಲಿದ್ದಾರೆ.
ಇದಕ್ಕೂ ಮೊದಲು ಮಹಿಳೆಯರ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ ಟೂರ್ನಿಯಲ್ಲಿ ಸತತ ಎರಡನೇ ಸೋಲನುಭವಿಸಿದ. ಈ ಜೋಡಿಯು ಬಲ್ಗೇರಿಯದ ಗೆಬ್ರಿಯೆಲಾ ಸ್ಟೋವಾ ಹಾಗೂ ಸ್ಟೆಫಾನಿ ಸ್ಟೋವಾ ವಿರುದ್ಧ 19-21, 20-22 ಗೇಮ್ ಗಳ ಅಂತರದಿಂದ ಸೋತಿದೆ. ಅಶ್ವಿನಿ-ಸಿಕ್ಕಿ ರೆಡ್ಡಿ ಬಿ ಗುಂಪಿನ ತಮ್ಮ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ನ ಕ್ಲೋಯ್ ಬರ್ಚ್ ಹಾಗೂ ಲಾರೆನ್ ಸ್ಮಿತ್ರನ್ನು ಎದುರಿಸಲಿದ್ದಾರೆ.
ಮಂಡಿನೋವಿನಿಂದ ಬಳಲುತ್ತಿರುವ ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಇಂಡೋನೇಶ್ಯದ ಅಗ್ರ ಶ್ರೇಯಾಂಕದ ಜೋಡಿ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಹಾಗೂ ಕೆವಿನ್ ಸಂಜಯಗೆ ವಾಕ್ ಓವರ್ ನೀಡಿದರು. ಈ ಜೋಡಿಯು ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ.
► ಲಕ್ಷ್ಯ ಸೇನ್ ಸೆಮಿಫೆನಲ್ಗೆ ಪ್ರವೇಶ
ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್ನಲ್ಲಿ ಪಿ.ವಿ. ಸಿಂಧು ಅವರೊಂದಿಗೆ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಕೂಡ ಸೆಮಿ ಫೈನಲ್ ಸ್ಥಾನವನ್ನು ದೃಢಪಡಿಸಿದರು. ಪುರುಷರ ಸಿಂಗಲ್ಸ್ನ ಎ ಗುಂಪಿನಲ್ಲಿ ಸೇನ್ ಅವರ ಇಬ್ಬರು ಎದುರಾಳಿಗಳಾದ ಜಪಾನ್ನ ಕೆಂಟೊ ಮೊಮೊಟಾ ಹಾಗೂ ಡೆನ್ಮಾರ್ಕ್ನ ರಾಸ್ಮಸ್ ಗೆಮ್ಕೆ ಗಾಯದ ಸಮಸ್ಯೆಯ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ ಸೇನ್ ಅವರ ಸೆಮಿಫೈನಲ್ ಹಾದಿ ಸುಲಭವಾಯಿತು.
20ರ ವಯಸ್ಸಿನ ಲಕ್ಷ್ಯ ಸೇನ್ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ 15-21, 14-21 ಗೇಮ್ಗಳ ಅಂತರದಿಂದ ಸೋತಿದ್ದಾರೆ. ಈ ಸೋಲಿನಿಂದಾಗಿ ಸೇನ್ ಎ ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಲಕ್ಷ್ಯ ಸೇನ್ ಅವರು ವರ್ಷಾಂ ತ್ಯದಲ್ಲಿ ನಡೆಯುವ ಟೂರ್ನಿಯ ಸೆಮಿ ಫೈನಲ್ಗೆ ಅರ್ಹತೆ ಪಡೆದ ಭಾರತದ ಕಿರಿಯ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಮೊಮೊಟಾ ಬೆನ್ನುನೋವಿನಿಂದಾಗಿ ಗಾಯಗೊಂಡು ನಿವೃತ್ತಿಯಾಗಿದ್ದರೆ, ಗೆಮ್ಕೆ ಮಂಡಿನೋವಿನಿಂದಾಗಿ ಅಕ್ಸೆಲ್ಸನ್ ವಿರುದ್ಧ ಪಂದ್ಯದಿಂದ ಹಿಂದೆ ಸರಿದಿದ್ದಾರೆ.