ಸಾಲಿಸಿಟರ್ ಜನರಲ್ - ಬಾರ್ ಅಸೋಸಿಯೇಶನ್ ಮುಖ್ಯಸ್ಥರ ನಡುವೆ ಸುಪ್ರೀಂ ಕೋರ್ಟಿನಲ್ಲಿ ವಾಕ್ಸಮರ

ಹೊಸದಿಲ್ಲಿ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ವಿಕಾಸ್ ಸಿಂಗ್ ನಡುವೆ ಇಂದು ಸುಪ್ರೀಂ ಕೋರ್ಟಿನಲ್ಲಿ ವ್ಯಾಗ್ಯುದ್ಧವೇ ನಡೆದಿದೆ. ದಿಲ್ಲಿ ವಾಯುಮಾಲಿನ್ಯ ಸಂಬಂಧಿತ ಪ್ರಕರಣದ ವಿಚಾರಣೆ ಸಂದರ್ಭ ಈ ವಿದ್ಯಮಾನ ನಡೆದಿದೆ ಎಂದು ndtv.com ವರದಿ ಮಾಡಿದೆ.
"ನನ್ನ ಒಂದೇ ಅಜೆಂಡಾ ಮಾಲಿನ್ಯ ಕಡಿಮೆಗೊಳಿಸುವುದೇ ವಿನಃ ಖಾಸಗಿ ವ್ಯಕ್ತಿಗಳನ್ನು ಪರಿಚಯಿಸುವುದಲ್ಲ,'' ಎಂದು ತುಷಾರ್ ಮೆಹ್ತಾ ಹೇಳಿದ ನಂತರ ಈ ವ್ಯಾಗ್ಯುದ್ಧ ನಡೆದಿದೆ
ಇಬ್ಬರು ಅರ್ಜಿದಾರರನ್ನು ಗುರಿಯಾಗಿಸಿ ಸಾಲಿಸಿಟರ್ ಜನರಲ್ ನೀಡಿದ ಈ ಹೇಳಿಕೆಯನ್ನು ವಿಕಾಸ್ ಸಿಂಗ್ ವಿರೋಧಿಸಿದರಲ್ಲದೆ ಅರ್ಜಿದಾರರಿಗೂ ಮಾಲಿನ್ಯ ಕಡಿಮೆಗೊಳಿಸುವುದನ್ನು ಬಿಟ್ಟು ಬೇರೆ ಅಜೆಂಡಾ ಇಲ್ಲ ಎಂದರು.
"ಅಜೆಂಡಾ ಇದೆ ಎಂಬ ಆರೋಪಕ್ಕೆ ನನ್ನ ಬಲವಾದ ಆಕ್ಷೇಪವಿದೆ. ಇಲ್ಲಿ ಮಾಲಿನ್ಯ ಒಂದೇ ಅಜೆಂಡಾ ಆಗಿದೆ. ಅವರು ಅಜೆಂಡಾ ಇದೆ ಎನ್ನುತ್ತಿದ್ದಾರೆ. ಏನಿದು ಅಸಂಬದ್ಧ(ನಾನ್ಸೆನ್ಸ್)? ಸಾಲಿಸಿಟರ್ ಜನರಲ್ ಅವರು ಹೀಗೆ ಹೇಳುವುದು ಸರಿಯೇ? ನನ್ನ ಅರ್ಜಿ ಸೆಂಟ್ರಲ್ ವಿಸ್ಟಾ ವಿರುದ್ಧ ಎಂದು ಕಳೆದ ಬಾರಿ ಅವರು ಹೇಳಿದ್ದರು.'' ಎಂದು ಅರ್ಜಿದಾರರಾದ ಆದಿತ್ಯ ದುಬೆ ಮತ್ತು ಅಮನ್ ಬಂಕ ಪರ ವಕೀಲರಾಗಿರುವ ಸಿಂಗ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ "ವಿಕಾಸ್ ಸಿಂಗ್ ಅವರು ತಾವು ರಸ್ತೆಯಲ್ಲಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬಿಸಿಸಿಐ ವಿಚಾರದಲ್ಲಿ ಇಂತಹುದೇ ಅಸಂಬದ್ಧ ಪದ ಬಳಸಿದಾಗ ನ್ಯಾಯಾಲಯ ಆಕ್ಷೇಪಿಸಿತ್ತು. ನಾನ್ಸೆನ್ಸ್ ಎಂಬ ಪದ ನ್ಯಾಯಾಲಯದಲ್ಲಿ ಅನುಮತಿಯಿಲ್ಲ,'' ಎಂದು ಹೇಳಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ, "ಇಬ್ಬರೂ ಹಿರಿಯ ವಕೀಲರು, ಈ ರೀತಿ ವ್ಯಾಗ್ಯುದ್ಧ ಬೇಡ,'' ಎಂದರು.