ನಿಝಾಮುದ್ದೀನ್ ಬಸ್ತಿ ಸಂರಕ್ಷಣಾ ಯೋಜನೆಗೆ 2 ಯುನೆಸ್ಕೋ ಪ್ರಶಸ್ತಿಗಳು

Photo: Twitter/@unesconewdelhi
ಹೊಸದಿಲ್ಲಿ: ರಾಜಧಾನಿಯ ನಿಝಾಮುದ್ದೀನ್ ಬಸ್ತಿ ಇಲ್ಲಿ ನಡೆಸಲಾದ ಎರಡು ಸಂರಕ್ಷಣಾ ಪ್ರಯತ್ನಗಳಿಗೆ ಯುನೆಸ್ಕೋ ಏಷ್ಯಾ-ಪೆಸಿಫಿಕ್ ಪ್ರಶಸ್ತಿ (UNESCO Asia-Pacific Awards for Cultural Heritage Conservation) ದೊರಕಿವೆ. ನಿಝಾಮುದ್ದೀನ್ ಪ್ರದೇಶವು ಹುಮಾಯೂನ್ ಸಮಾಧಿಯ ವಿಶ್ವ ಪಾರಂಪರಿಕ ತಾಣ, ಶತಮಾನಗಳಷ್ಟು ಇತಿಹಾಸವಿರುವ ಹಝ್ರತ್ ನಿಝಾಮುದ್ದೀನ್ ಬಸ್ತಿ ಹಾಗೂ ಸುಂದರ್ ನರ್ಸರಿ ಹೊರತಾಗಿ 16ನೇ ಶತಮಾನದ ಬಾಟಾಶೆವಲ ಟೋಂಬ್-ಗಾರ್ಡನ್ ಕಾಂಪ್ಲೆಕ್ಸ್, 16ನೇ ಶತಮಾನದ ಕವಿ ಖಾನ್ ಐ ಖನಾನ್ ರಹೀಂ ಸಮಾಧಿ ಹಾಗೂ ಅಝೀಂಗಂಜ್ ಸೆರಾಯ್ನ ಮುಘಲ್ ಕಾಲದ ಕ್ಯಾರವಾನ್ಸೆರಾಯ್ ಹೊಂದಿದೆ.
ಇಲ್ಲಿನ ಅರ್ಬನ್ ರಿನಿವಲ್ ಪ್ರಾಜೆಕ್ಟ್ 2007ರಲ್ಲಿ ಆರಂಭಗೊಂಡು ಈ ಎರಡು ಪ್ರತ್ಯೇಕ ವಲಯಗಳನ್ನು ಒಂದು ಸಾಂಸ್ಕೃತಿಕ ಮಹತ್ವದ ಸಂರಕ್ಷಿತ ಪ್ರದೇಶವಾಗಿ ಮಾರ್ಪಡಿಸಿತ್ತು. ಈ ಸಂರಕ್ಷಣಾ ಕಾರ್ಯವನ್ನು ಆಗಾ ಖಾನ್ ಟ್ರಸ್ಟ್ ಫಾರ್ ಕಲ್ಚರ್, ದಕ್ಷಿಣ ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್, ಪುರಾತತ್ವ ಸರ್ವೇಕ್ಷಣಾ ಇಲಾಖೆ, ಡೆಲ್ಲಿ ಅರ್ಬನ್ ಹೆರಿಟೇಜ್ ಫೌಂಡೇಶನ್, ದರ್ಗಾ ಸಮಿತಿ ಹಾಗೂ ಹಝ್ರತ್ ನಿಝಾಮುದ್ದೀನ್ ಬಸ್ತಿಯ ನಿವಾಸಿ ಸಮುದಾಯ ಗುಂಪುಗಳ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ.
ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯನ್ನು ಪ್ರಮುಖವಾಗಿಸಿ ಪಾರಂಪರಿಕ ತಾಣವನ್ನು ರಕ್ಷಿಸಿ ಮಾಡಿದ ಸಾಧನೆಗೆ ಸಂಘಟಕರನ್ನು ಯುನೆಸ್ಕೋ ಪ್ರಶಸ್ತಿ ಸಮಿತಿ ಶ್ಲಾಘಿಸಿದೆ.