ಜಮ್ಮು-ಕಾಶ್ಮೀರ: ಸಂವಹನ ನಿರ್ಬಂಧ ಕುರಿತು ಸುಪ್ರೀಂ ತೀರ್ಪಿನ ಬಳಿಕ 93 ಇಂಟರ್ನೆಟ್ ಸ್ಥಗಿತ ಆದೇಶ
ಸಂಸದೀಯ ಸಮಿತಿಯ ವರದಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಡಿ.3: ಸಂವಹನ ನಿರ್ಬಂಧಗಳ ಎಲ್ಲ ಆದೇಶಗಳನ್ನು ಪ್ರಕಟಿಸುವಂತೆ ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯವು ಆಡಳಿತಕ್ಕೆ ನಿರ್ದೇಶ ನೀಡಿದ ಬಳಿಕ ಜಮ್ಮು-ಕಾಶ್ಮೀರ ಸರಕಾರವು ಕೇಂದ್ರಾಡಳಿತ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಿ 93 ಆದೇಶಗಳನ್ನು ಹೊರಡಿಸಿದೆ ಎಂದು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.
ಇವುಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಕ್ಕೆ ಅಧಿಕೃತ ಅಧಿಕಾರಿಗಳ ನಿರ್ದೇಶನಗಳನ್ನು ದೃಢಪಡಿಸಲು ಸಕ್ಷಮ ಪ್ರಾಧಿಕಾರಗಳು ಹೊರಡಿಸಿದ್ದ 73 ಆದೇಶಗಳು ಸೇರಿವೆ.
ಈ ಎಲ್ಲ ಆದೇಶಗಳು ಗೃಹ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಸಾರ್ವಜನಿಕ ಅವಗಾಹನೆಗೆ ಲಭ್ಯವಿದೆ ಎಂದು ಸಮಿತಿಯ ವರದಿಯು ತಿಳಿಸಿದೆ.
ವಾಕ್ ಸ್ವಾತಂತ್ರದ ಹಕ್ಕನ್ನು ಚಲಾಯಿಸಲು ಹಾಗೂ ಯಾವುದೇ ವೃತ್ತಿ ಅಥವಾ ಉದ್ಯಮವನ್ನು ನಡೆಸಲು ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು ಆಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು 2020,ಜ.10ರಂದು ತೀರ್ಪು ನೀಡಿತ್ತು.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಗಿದ್ದ 2019,ಆ.5ರ ಮುನ್ನಾದಿನದಿಂದ ಸಂವಹನ ಸ್ಥಗಿತ ಮತ್ತು ಇತರ ನಿರ್ಬಂಧಗಳ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು,ಇಂಟರ್ನೆಟ್ ಸೇವೆಗಳನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸುವುದು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದು ಹೇಳಿತ್ತು.
ನೊಂದ ವ್ಯಕ್ತಿಗಳು ಇಂಟರ್ನೆಟ್ ಸ್ಥಗಿತವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಾಗಲು ಅಂತಹ ಆದೇಶಗಳು ವಿವರವಾದ ಕಾರಣಗಳನ್ನು ಒಳಗೊಂಡಿರಬೇಕು ಎಂದು ನ್ಯಾಯಾಧೀಶರು ಹೇಳಿದ್ದರು.
2020ರಲ್ಲಿ ವಿಶ್ವಾದ್ಯಂತ 115 ಇಂಟರ್ನೆಟ್ ಸೇವೆಗಳ ಅಮಾನತುಗಳು ಸಂಭವಿಸಿದ್ದು, ಭಾರತದಲ್ಲಿಯೇ ಇಂತಹ 109 ಘಟನೆಗಳು ನಡೆದಿದ್ದವು ಎಂದು ಹೇಳಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿಯು ದೀರ್ಘಾವಧಿಯ ಇಂಟರ್ನೆಟ್ ಸ್ಥಗಿತದಿಂದ ಆರ್ಥಿಕ ಪರಿಣಾಮಗಳ ವಿವರವಾದ ಮೌಲ್ಯಮಾಪನ ನಡೆಸುವಂತೆಯೂ ಕರೆ ನೀಡಿದೆ.