ಸಂವಿಧಾನ ಮುನ್ನುಡಿ ತಿದ್ದುಪಡಿ ಮಸೂದೆ ಮಂಡಿಸಲು ಮುಂದಾದ ಬಿಜೆಪಿ ಸಂಸದ: ರಾಜ್ಯಸಭೆಯಲ್ಲಿ ಕೋಲಾಹಲ

Photo: PTI
ಹೊಸದಿಲ್ಲಿ: ಇತರ ಬದಲಾವಣೆಗಳ ಜೊತೆಗೆ "ಸಮಾಜವಾದಿ" ಪದವನ್ನು "ಸಮಾನ" ಎಂದು ಬದಲಿಸಲು ಸಂವಿಧಾನದ ಮುನ್ನುಡಿಗೆ ತಿದ್ದುಪಡಿ ಮಾಡುವ ಮಸೂದೆಯೊಂದನ್ನು ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಕೆ.ಜೆ. ಆಲ್ಫೋನ್ಸ್ ಪರಿಚಯಿಸಲು ಮುಂದಾದ ಆಘಾತಕಾರಿ ಬೆಳವಣಿಗೆ ನಡೆದಿದ್ದು, ಇದಕ್ಕೆ ವಿರೋಧ ಪಕ್ಷದ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು.
ಆಲ್ಫೋನ್ಸ್ ಅವರು ಮೇಲ್ಮನೆಯಲ್ಲಿ ಸಂವಿಧಾನ (ತಿದ್ದುಪಡಿ) ಮಸೂದೆ, 2021 ಅನ್ನು ಪರಿಚಯಿಸುವ ಪ್ರಸ್ತಾವನೆಯನ್ನು ಮಂಡಿಸಿದರು. ಇದಕ್ಕೆ ರಾಷ್ಟ್ರೀಯ ಜನತಾ ದಳದ ಸಂಸದ ಪ್ರೊ. ಮನೋಜ್ ಕುಮಾರ್ ಝಾ ಆಕ್ಷೇಪ ವ್ಯಕ್ತಪಡಿಸಿದರು.
"ಪೀಠಿಕೆಗೆ ತಿದ್ದುಪಡಿಯು ಸಂವಿಧಾನದ ಸೌಧದ ಮೇಲಿನ ದಾಳಿಯಾಗಿದೆ" ಎಂದು ಪ್ರೊ. ಝಾ ಹೇಳಿದರು. ಮಸೂದೆಯು ರಾಷ್ಟ್ರಪತಿಗಳ ಪೂರ್ವಾನುಮತಿಯನ್ನು ಪಡೆದಿಲ್ಲ ಎಂದು ಹೇಳಿದರು.
ಆದಾಗ್ಯೂ, ಉಪ ಸಭಾಪತಿ ಹರಿವಂಶ್ ಅವರು ಮಸೂದೆಯನ್ನು ಮಂಡಿಸಲು ರಾಷ್ಟ್ರಪತಿಗಳ ಒಪ್ಪಿಗೆಯ ಅಗತ್ಯವಿಲ್ಲ ಹಾಗೂ ಸದನವು ಈ ವಿಷಯದ ಬಗ್ಗೆ ನಿರ್ಧರಿಸುತ್ತದೆ ಎಂದು ಹೇಳಿದರು.
ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರು ರೂಲಿಂಗ್ ಅನ್ನು ನಂತರದ ದಿನಾಂಕದಲ್ಲಿ ನೀಡಬೇಕೆಂದು ಸಲಹೆ ನೀಡಿದರು. ಹರಿವಂಶ್ ಅವರು ನಿರ್ಧಾರವನ್ನು "ಕಾಯ್ದಿರಿಸಲಾಗಿದೆ" ಎಂದು ಹೇಳಿದರು.