ಉಪಚುನಾವಣೆ ಸೋಲಿನಿಂದ ಎಚ್ಚೆತ್ತು ಬಿಜೆಪಿಯಿಂದ ರಾತ್ರೋರಾತ್ರಿ ಕೃಷಿ ಕಾಯಿದೆ ವಾಪಸ್: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಕಾಂಗ್ರೆಸ್ ಪಕ್ಷ ಹಣವಂತರಿಗೆ ಮಣೆ ಹಾಕದೆ ಸಾಮಾನ್ಯ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿದೆ. ನೀವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿದರೆ, ಎಂತಹ ದುಡ್ಡಿದ್ದವನು ಕೂಡಾ ಧೂಳಿಪಟವಾಗುತ್ತಾನೆ ಎಂದು ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಜೈ ಭವಾನಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಲಬುರಗಿ ಯಾದಗಿರಿ ವಿಧಾನಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮೂರು ಕೃಷಿ ಕಾಯಿದೆಗಳ ವಿರುದ್ಧ ನಾವು ಮಾತನಾಡಿದಾಗ ನಮ್ಮ ಮಾತನ್ನು ಮೋದಿ ಒಪ್ಪಲಿಲ್ಲ. ಈಗೇನಾಗಿದೆ, ಉಪ ಚುನಾವಣೆ ಸೋಲಿನ ಪರಿಣಾಮ ಹಾಗೂ ಮುಂಬರುವ ಯುಪಿ, ಪಂಜಾಬ್ ಹಾಗೂ ಬೇರೆ ರಾಜ್ಯಗಳಲ್ಲಿ ಸೋಲಾಗುವುದನ್ನು ಮನಗಂಡು ಯಾವುದೇ ಚರ್ಚೆ ನಡೆಸದೆ ಕಳ್ಳರತರ ರಾತ್ರೋರಾತ್ರಿ ಕೃಷಿ ಕಾಯಿದೆಗಳನ್ನು ವಾಪಸ್ ಪಡೆದರು ಎಂದು ಟೀಕಿಸಿದರು.
'ಆರ್ಟಿಕಲ್ 371ಜೆ' ಜಾರಿಯಾಗಲೂ ಯಾರು ಕಾರಣಕರ್ತರು ಎನ್ನುವ ಬಗ್ಗೆ ಬೇರೆ ಬೇರೆ ಮಾತನಾಡುತ್ತಾರೆ. ಆದರೆ, ಸಂಸತ್ತಿನಲ್ಲಿ ಎಲ್ಲ ವಿವರವನ್ನು ದಾಖಲಿಸಿದ್ದರೆ ಅಲ್ಲಿ ಎಲ್ಲರ ಹಣೆಬರಹ ತಿಳಿಯಲಿದೆ ಎಂದರು. ವಿಶೇಷ ಸ್ಥಾನಮಾನ ಸಿಕ್ಕ ನಂತರ ಈ ಭಾಗದ ಬಡ ಮಕ್ಕಳು ಡಾಕ್ಟರ್ ಇಂಜೀನಿಯರ್ ಆಗಿದ್ದಾರೆ. ಇದಕ್ಕೆ ಕಾರಣ ಯಾರು? ನಾವು ಹೋರಾಟ ಮಾಡಿದ್ದರಿಂದಲೇ ಸಾಧ್ಯವಾಗಿದೆ ಎಂದರು.
ಇಡೀ ದೇಶದಲ್ಲಿಯೇ ಕರ್ನಾಟಕ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲಿಯೂ ಕೂಡಾ ಗ್ರಾಮಪಂಚಾಯತಿ ಸದಸ್ಯರಿಗೆ ವಿಧಾನಪರಿಷತ್ ಅಭ್ಯರ್ಥಿಗೆ ಮತದಾನದ ಹಕ್ಕು ನೀಡಿಲ್ಲ. ಆದರೆ ಕಾಂಗ್ರೆಸ್ ಪಕ್ಷದವರು ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಗ್ರಾಮಪಂಚಾಯತಿ ಸದಸ್ಯರಿಗೆ ಮತದಾನದ ಹಕ್ಕು ಕೊಡಿಸಿದ್ದೇವೆ ಇದು ಇತಿಹಾಸವಾಗಿ ಉಳಿದಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲರ ಅನುಭವವನ್ನು ಕೊಂಡಾಡಿದ ಖರ್ಗೆ ಅವರು ಈ ಹಿಂದಿನ ಇತಿಹಾಸ ತೆಗೆದು ನೋಡಿದರೆ ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮಾನ್ಯ ಕಾರ್ಯಕರ್ತರಿಗೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದೆ. ಆಗಲೂ ಕೂಡಾ ಹಣವಂತರೆ ನಮ್ಮ ವಿರುದ್ದ ಸ್ಪರ್ಧಿಸಿದ್ದರು. ಆದರೆ ಪಕ್ಷ ಒಂದಾಗಿ ಸಂಘಟನೆಯೊಂದಿಗೆ ಕೆಲಸ ಮಾಡಿ ಗೆದ್ದಿದ್ದೇವೆ ಈಗಲೂ ಕೂಡಾ ಶಿವಾನಂದ ಪಾಟೀಲನಂತ ಸಮಾನ್ಯ ಕಾರ್ಯಕರ್ತ ಅಭಿವೃದ್ದಿ ತುಡಿತ ಇರುವ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ತನ್ನ ಅಧಿಕಾರಲ್ಲಿರುವಷ್ಟು ವರ್ಷ ನೀರಾವರಿ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಒತ್ತು ನೀಡಿದೆ. ನರೇಗಾ, ಆಹಾರ ಭದ್ರತೆ, ಉಚಿತ ಶಿಕ್ಷಣದಂತ ಗಮನಾರ್ಹ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೊಳಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಅಭಿವೃದ್ದಿ ಕಾರ್ಯಗಳಿಗೆ ತೀಲಾಂಜಲಿ ನೀಡಿದೆ ಎಂದು ಟೀಕಿಸಿದರು.
ಪ್ರತ್ಯೇಕ ರೇಲ್ವೆ ವಲಯ, ಜವಳಿ ಪಾರ್ಕ್, ಮುಂತಾದ ಯೋಜನೆಗಳನ್ನು ಮಂಜೂರು ಮಾಡಿದ್ದರೂ ಕೂಡಾ ನನ್ನ ವಿರುದ್ದ ಮಸಲತ್ತು ನಡೆಸಿದ ಮೋದಿ ಶಾ ಸೋಲಿಸಿದರು. ನೀವೆಲ್ಲ ನನ್ನ ಅಂದಿನ ಸೋಲಿಗೆ ಸೇಡಿಗೆ ಇಂದು ಶಿವಾನಂದ ಪಾಟೀಲ್ ರನ್ನು ಗೆಲ್ಲಿಸುವ ಮೂಲಕ ಅಭಿವೃದ್ದಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಏನು ಸಾಧನೆ ಮಾಡಿದೆ ಎಂದು ಓಟು ಕೊಡಬೇಕು? ಅಡುಗೆ ಅನಿಲ, ಡಿಸೇಲ್ ಪೆಟ್ರೋಲ್‌ಬೆಲೆ ಏರಿಸಿದ್ದಕ್ಕೆ ಓಟು ಕೊಡಬೇಕಾ? ದಿನಬಳಕೆ ವಸ್ತುಗಳ ಬೆಲೆ ಏರಿಸಿದ್ದಕ್ಕೆ ಓಟು ಕೊಡಬೇಕಾ? ಕೇಂದ್ರದ ಸುಳ್ಳಿನ ಸರದಾರನ ಆಡಳಿತದಿಂದ ಜನರು ಸಂಕಷ್ಟದಲ್ಲಿದ್ದಾರೆ. ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಾದ ಕನೀಝ್ ಫಾತಿಮಾ ಹಾಗೂ ವಿಜಯಕುಮಾರ್ ರಾಮಕೃಷ್ಣ ಮಾತನಾಡಿದರು. ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಶಾಸಕರಾದ ಅಜಯಸಿಂಗ್, ಮಾಜಿ ಸಚಿವರಾದ ಶರಣಪ್ರಕಾಶ ಪಾಟೀಲ್, ಬಾಬುರಾವ ಚವ್ಹಾಣ, ಮಾಜಿ ಎಂ ಎಲ್‌ಸಿ ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕರಾದ ಬಿ ಆರ್ ಪಾಟೀಲ್, ವಿಜಯಕುಮಾರ್ ರಾಮಕೃಷ್ಣ, ಸುಭಾಷ್ ರಾಠೋಡ, ಭೀಮರೆಡ್ಡಿ ಪಾಟೀಲ್ ಕುರಕುಂದಾ, ಸೈಯದ್ ಅಹಮದ್, ಲತಾ ರಾಠೋಡ, ನೀಲಕಂಠರಾವ್ ಮುಲಗೆ, ಪ್ರವೀಣ ಹರವಾಳ, ಬಾಬಾಖಾನ್, ಕಿರಣ್ ದೇಶಮಖ್, ಮಜರ್ ಹುಸೇನ್, ಫಾರೂಕ್ ಸೇಠ್, ರಾಜೀವ್ ಜಾನೆ ಹಾಗೂ ಮತ್ತಿತರಿದ್ದರು.








