ಮುಂಬರುವ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ರಣರಂಗದ ರಾಜಕಾರಣ ಮಾಡುತ್ತೇವೆ: ಡಿ.ಕೆ.ಶಿವಕುಮಾರ್

ಶಿವಮೊಗ್ಗ,ಡಿ.4: ರಾಜ್ಯದಲ್ಲಿ ಬಿಜೆಪಿ ಹಾಗೂ ಯಡಿಯೂರಪ್ಪ ಅವರದ್ದು ಮುಗಿದ ಅಧ್ಯಾಯವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಸರ್ಜಿ ಕನ್ವೆನ್ಶನ್ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ಮುಂಬರುವ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ರಣರಂಗದ ರಾಜಕಾರಣ ಮಾಡುತ್ತೇವೆ. ಆಗ ಮತ್ತೊಮ್ಮೆ ಶಿವಮೊಗ್ಗಕ್ಕೆ ಬರುತ್ತೇವೆ ಎಂದರು.
ಶಿವಮೊಗ್ಗದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ಕೆ.ಎಸ್.ಈಶ್ವರಪ್ಪ ಎಂಬ ಎರಡು ಮುತ್ತು ರತ್ನಗಳಿವೆ. ಅವರೇನು ಮಾಡುತ್ತಿದ್ದಾರೆ ಎಂಬುವುದು ಅರ್ಥವಾಗುತ್ತಿಲ್ಲ. ಉಡುಪಿ ಠಾಣೆಯೊಂದರಲ್ಲಿ ಪೊಲೀಸ್ ಅಧಿಕಾರಿಗಳು ಕೇಸರಿ ಶಾಲು ಹಾಕುವ ಸ್ಥಿತಿ ರಾಜ್ಯಕ್ಕೆ ಬಂದೊದಗಿದೆ ಎಂದು ತಿಳಿಸಿದರು.
ಇಡೀ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಬೆಲೆ ಏರಿಕೆ, ಕೋವಿಡ್‍ನಿಂದಾಗಿ ಉದ್ಯೋಗ ಹಾಗೂ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಆದರೆ, ಡಬಲ್ ಎಂಜಿನ್ ಸರಕಾರ ಮಾತ್ರ ಯಾರ ಸಹಾಯಕ್ಕೂ ಬಂದಿಲ್ಲ ಆರೋಪಿಸಿದರು.
ಡಬಲ್ ಎಂಜಿನ್ ಸರಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳೂ ರಾಜ್ಯದಲ್ಲಿ ನಡೆದಿಲ್ಲ. ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರನ್ನು ತಮ್ಮತ್ತ ಸೆಳೆದಿದ್ದು ಬಿಟ್ಟರೇ ಬೇರೇನೂ ಮಾಡಿಲ್ಲ ಎಂದು ಟೀಕಿಸಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಸರಕಾರವೂ ಬಲಿಷ್ಠವಾಗಿದೆ. ಆದರೆ, ಜನರು ಹಾಗೂ ವಿವಿಧ ಪಕ್ಷಗಳಿಂದ ನಾಯಕರು ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದಾರೆ. ಇದು ಕಾಂಗ್ರೆಸ್‍ನಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವುದಕ್ಕೆ ದೊಡ್ಡ ಸಾಕ್ಷಿಯಾಗಿದೆ. ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದು ಬೇಕಾಗಿಲ್ಲ ಎಂದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದ್ದು, ಪ್ರತಿ ಗುತ್ತಿಗೆದಾರರು ಶೇ.40ರಷ್ಟು ಕಮಿಷನ್ ನೀಡುತ್ತಿದ್ದಾರೆ ಆರೋಪಿಸಿದರು.
ಎನ್‍ಒಸಿ ನೀಡುವುದಕ್ಕೂ ಹಣ ನೀಡುವ ದೈನೇಸಿ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಖುದ್ದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಪತ್ರದ ಮೂಲಕ ತಿಳಿಸಿದ್ದಾರೆ. ಇಂತಹ ಭ್ರಷ್ಟ ಸರಕಾರ ನಾನು ಇದುವರೆಗೆ ಕಂಡಿಲ್ಲ. ಒಂದುವೇಳೆ, ತಮ್ಮ ಅವಧಿಯಲ್ಲಿ ಎನ್‍ಒಸಿಗಾಗಿ ಗುತ್ತಿಗೆದಾರರಿಂದ ಹಣ ಪಡೆದಿರುವ ಬಗ್ಗೆ ಒಬ್ಬರೇ ಒಬ್ಬ ಗುತ್ತಿಗೆದಾರರು ಹೇಳಿದ್ದಲ್ಲಿ ನಾನು ರಾಜಕೀಯ ಸನ್ಯಾಸ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
ಒಂದುವೇಳೆ, ಕಾಂಗ್ರೆಸ್ ಅವಧಿಯಲ್ಲಿ ನರೇಗಾದಂತಹ ಜನಪ್ರಿಯ ಯೋಜನೆ ನೀಡದಿದ್ದರೆ ಬಿಜೆಪಿ ಅವಧಿಯಲ್ಲಿ ಕೇಂದ್ರದಿಂದ ಒಂದೇ ಒಂದು ರೂಪಾಯಿ ಕೂಡ ನೀಡುತ್ತಿರಲಿಲ್ಲ. ಮೋದಿ ನೇತೃತ್ವದ ಕೇಂದ್ರ ಸರಕಾರ ಒಂದೂ ಇಂತಹ ಯೋಜನೆಯನ್ನು ನೀಡಿಲ್ಲ. ಇದ್ದರೆ ತಿಳಿಸಲಿ ಎಂದು ಹೇಳಿದರು.
ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಾಗಿ ರಾಜ್ಯಪಾಲರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪತ್ರ ಬರೆದಿದ್ದರು. ಒಂದುವೇಳೆ, ಈಶ್ವರಪ್ಪ ಅವರಿಗೆ ಮರ್ಯಾದೆ ಇದ್ದಿದ್ದರೆ ಆಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಬೀಡಬೇಕಿತ್ತು ಎಂದರು.
ವಾಸ್ತವದಲ್ಲಿ ಈಶ್ವರಪ್ಪ ಅವರ ಮಿದುಳು ಮತ್ತು ನಾಲಗೆಯ ನಡುವಿನ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ, ಏನೇನೋ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಬಿ.ಕೆ.ಸಂಗಮೇಶ್, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಕೆ.ಬಿ.ಪ್ರಸನ್ನಕುಮಾರ್, ವಡ್ನಾಳ್ ರಾಜಣ್ಣ, ಡಿ.ಜಿ.ಶಾಂತನಗೌಡ, ಬೇಳೂರು ಗೋಪಾಕೃಷ್ಣ, ಎಚ್.ಎಂ.ಚಂದ್ರಶೇಖರಪ್ಪ, ಪ್ರಮುಖರಾದ ಶಾಂತವೀರಪ್ಪಗೌಡ, ಹೊದಿಗೆರೆ ರಮೇಶ್, ಗೋಣಿ ಮಾಲತೇಶ್, ವೇದಾ ವಿಜಯ್ ಕುಮಾರ್, ಆರ್.ಎಂ.ಮಂಜುನಾಥಗೌಡ, ಅಘ ಸುಲ್ತಾನ್, ಎಂ.ಬಿ.ಲಕ್ಷ್ಮೀನಾರಾಯಣ, ಅಬ್ದುಲ್ ಜಬ್ಬಾರ್ ಸೇರಿದಂತೆ ಇತರರಿದ್ದರು. ವ್ಯಾಕ್ಸಿನೇಟ್ ಕರ್ನಾಟಕ ಸ್ಪರ್ಧೆಯಲ್ಲಿ ಶಿವಮೊಗ್ಗದ ಆದಿತ್ಯಾ, ರಾಜ್ವಿಕಾ ವಿಜೇತರಾಗಿದ್ದು, ಅವರಿಗೆ ಟ್ಯಾಬ್ ನೀಡಲಾಯಿತು.
ಶಿವಮೊಗ್ಗ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತರೂ ಕಾಂಗ್ರೆಸ್‍ಗೆ ಬೆಂಬಲಿಸಲು ಮುಂದಾಗಿದ್ದಾರೆ. ಇದು ಶುಭ ಸಂಕೇತವಾಗಿದೆ. ಎರಡು ಮತಗಳನ್ನು ನೀಡುವಂತೆ ದಾರಿ ತಪ್ಪಿಸಲಾಗುತ್ತಿದೆ. ಅದಕ್ಕ್ಯಾರೂ ತಲೆಗೊಡದೇ ಒಂದೇ ಒಂದು ಮತ ನೀಡಬೇಕು. ತನಗೆ ಮತ ನೀಡಿ.
- ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಅಭ್ಯರ್ಥಿ







