ಪ್ರಶಾಂತ್ ಕಿಶೋರ್ ಎಂದೂ ರಾಹುಲ್ ಗಾಂಧಿ ಆಗಲಾರ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

ಬೆಂಗಳೂರು, ಡಿ. 3: ‘ದೇಶವನ್ನು ಸಂಕಷ್ಟಕ್ಕೆ ದೂಡಿದ ಕೋಮುವಾದಿ ಸರಕಾರದ ದುರಾಡಳಿತದ ವಿರುದ್ಧ ತುಟಿಕ್ ಪಿಟಿಕ್ ಎನ್ನದ ಪ್ರಶಾಂತ್ ಕಿಶೋರ್ ಎಂಬಾತ ಜನಪರವಾದ ಸೈದ್ಧಾಂತಿಕ ವ್ಯಕ್ತಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವುದನ್ನು ನೋಡುತ್ತಿದ್ದರೆ, ಆತನ ಅವಕಾಶವಾದಿತನ ಅರಿವಾಗುತ್ತದೆ. ಸಂಕಷ್ಟದಲ್ಲಿ ದೇಶದ ಪರವಾಗಿ ನಿಲ್ಲದ ಆತ ಭಾರತೀಯನೇ?' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಸಾಮಾಜಿಕ ಮತ್ತು ರಾಜಕೀಯ ಜ್ಞಾನ ಉಳ್ಳ ಯಾವುದೇ ವ್ಯಕ್ತಿ ಚುನಾವಣಾ ತಂತ್ರಜ್ಞ ಆಗಬಹುದು, ಆದರೆ, ಅವರು ದೇಶದ ಜನರ ಸಮಸ್ಯೆಗಳ ಪರವಾಗಿ ಮತ್ತು ಮೂಲಭೂತವಾದಿಗಳ ವಿರುದ್ಧ ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಓರ್ವ ಅವಕಾಶವಾದಿ ಮನಸ್ಥಿತಿಯ ಪ್ರಶಾಂತ್ ಕಿಶೋರ್ ಅಂತಹವರೇ ಸಾಕ್ಷಿ! ಜನಪರವಾಗಿಲ್ಲದ ಬೊಗಳೆ ಮಾತುಗಳಿಂದ ಜನರಿಗೇನು ಪ್ರಯೋಜನ?' ಎಂದು ಕೇಳಿದ್ದಾರೆ.
‘ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿರುವ ಪ್ರಶಾಂತ್ ಕಿಶೋರ್ ಈ ಹಿಂದೆ ಹಲವು ಪಕ್ಷಗಳ ಹಿತಾಸಕ್ತಿಗಾಗಿ ಕೆಲಸ ಮಾಡಿದಂತಹ ವ್ಯಕ್ತಿ. ಚುನಾವಣೆ ಮತ್ತು ವೈಯಕ್ತಿಕ ಲೆಕ್ಕಾಚಾರಗಳ ಆಚೆಗೆ ಆತ ಎಂದೂ ಭಾರತದ ಬಡ ಜನರು, ರೈತರು ಮತ್ತು ಕೇಂದ್ರ ಸರಕಾರದ ದುರಾಡಳಿತದ ಬಗ್ಗೆ ಮಾತನಾಡುವ ಜವಾಬ್ದಾರಿಯನ್ನು ತೋರಿಲ್ಲ. ಇದಕ್ಕೆ ಪೂರಕ ಎಂಬಂತೆ, ‘ಲಖಿಂಪುರ ಖೇರಿ'ಯಲ್ಲಿ ರೈತರ ಹತ್ಯೆ ಪ್ರಕರಣವನ್ನು ಇರಿಸಿಕೊಂಡು ಕಾಂಗ್ರೆಸ್ ಪಕ್ಷವು ಪುನಶ್ಚೇತನಗೊಳ್ಳಬಹುದು ಎಂದು ಕೆಲವರು ಭಾವಿಸಿದ್ದಾರೆ. ಅವರಿಗೆಲ್ಲ ನಿರಾಶೆ ಆಗಲಿದೆ ಎಂಬ ಆತನ ಅಸೂಕ್ಷ್ಮ ಮತ್ತು ಮಾನವೀಯತೆಗೆ ವಿರುದ್ಧವಾದ ಮಾತುಗಳೇ ಸಾಕ್ಷಿ' ಎಂದು ವಾಗ್ದಾಳಿ ನಡೆಸಿದ್ದಾರೆ.
‘ನಾನು ನೋಡಿದ ಪ್ರಕಾರ ಓರ್ವ ಪ್ರಜ್ಞಾವಂತ, ಸರಳ ಹಾಗೂ ಸದಾ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿತ್ವ ಉಳ್ಳ ರಾಹುಲ್ ಗಾಂಧಿಯವರು ಓರ್ವ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಸರಿಯಾದ ಮಾರ್ಗದಲ್ಲೇ ಇದ್ದಾರೆ. ಇಲ್ಲಿಯವರೆಗೂ ಅವರು ನಡೆಸಿರುವ ಹೋರಾಟದ ರೀತಿಯೇ ಇದಕ್ಕೆ ಸಾಕ್ಷಿ. ಆದರೆ, ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಇರುವ ಪಕ್ಷಗಳಿಗೆ ಕೆಲಸ ಮಾಡಿ ಚುನಾವಣಾ ತಂತ್ರಜ್ಞ ಎಂಬ ಹೆಸರನ್ನೂ ಮತ್ತು ಒಂದಷ್ಟು ಸಂಪನ್ಮೂಲವನ್ನೂ ಸುಲಭವಾಗಿ ಪಡೆದ ಪ್ರಶಾಂತ್ ಅವರ ದನಿಯು ಕೇಂದ್ರ ಸರಕಾರದ ಕೃಷಿ ತಿದ್ದುಪಡಿ ಕಾಯ್ದೆಗಳ ಸಂದರ್ಭದಲ್ಲಿ ಅಡಗಿ ಹೋಗಿತ್ತು ಎಂಬುದನ್ನು ನಾನು ನೆನಪಿಸಲು ಬಯಸುತ್ತೇನೆ' ಎಂದು ಮಹದೇವಪ್ಪ ಟೀಕಿಸಿದ್ದಾರೆ.
‘ಅಕ್ಷರ ಬಲ್ಲ ಮತ್ತು ಸಮಾಜದಲ್ಲಿ ನಡೆಯುವ ಸಂಗತಿಗಳನ್ನು ಚೆನ್ನಾಗಿಯೇ ಅರ್ಥ ಮಾಡಿಕೊಳ್ಳಬಲ್ಲ ಪ್ರಶಾಂತ್ ಕಿಶೋರ್ ಅವರ ಜ್ಞಾನ, ತಿಳಿವಳಿಕೆಯು ದೇಶ ಸಾಮಾನ್ಯರ ಪರವಾಗಿ ಇರದೇ ಕೇವಲ ಆತನ ವೈಯಕ್ತಿಕ ಲಾಭದ ಪರವಾಗಿದೆ ಎಂಬ ಅಂಶ ಸ್ಪಷ್ಟವಾಗಿ ಗೊತ್ತಿದ್ದ ಮೇಲೂ, ಜನಪರವಾಗಿರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಆತ ಟೀಕೆಗಳಿಗೆ ಯಾವುದೇ ಮೌಲ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣಿಗಳಿಗೆ ತನ್ನದೇ ಆದ ಅವಕಾಶವಿದೆ ಇದೆ. ಆದರೆ, ಆ ಟೀಕೆಯನ್ನು ಮಾಡುವ ವ್ಯಕ್ತಿ ಟೀಕಿಸಲು ಅರ್ಹನಾಗಿರಬೇಕು, ಅವನಲ್ಲಿ ಜನ ಸಾಮಾನ್ಯರ ಪರವಾಗಿ ಹೋರಾಟ ನಡೆಸುವ ಕಿಂಚಿತ್ ಬದ್ಧತೆ ಇರಬೇಕು' ಎಂದು ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
‘ಈ ಎಲ್ಲ ಸಾಮಾನ್ಯ ಅರ್ಹತೆಗಳಿಗೆ ಬಹುದೂರ ಇರುವ ಪ್ರಶಾಂತ್ ಕಿಶೋರ್ ಎಲ್ಲರಂತೆಯೇ ಓರ್ವ ಅವಕಾಶವಾದಿಯಾಗಿ ನನಗೆ ಕಾಣುತ್ತಾನೆಯೇ ವಿನಃ ಜನರ ಪರವಾಗಿರುವ ರಾಹುಲ್ ಗಾಂಧಿಯಂತೆ ಕಾಣಲು ಸಾಧ್ಯವೇ ಇಲ್ಲ. ಪ್ರಶಾಂತ್ ಕಿಶೋರ್ ಎಂದಿಗೂ ರಾಹುಲ್ ಗಾಂಧಿಯಂತೆ ಜನಪರವಾಗಿ ಯೋಚಿಸಲಾರ. ಲಾಭಕೋರ, ಅವಕಾಶವಾದಿ ಪ್ರಶಾಂತ್ ಕಿಶೋರ್ ಎಂದೂ ರಾಹುಲ್ ಗಾಂಧಿ ಆಗಲಾರ!' ಎಂದು ಡಾ.ಮಹದೇವಪ್ಪ ಟೀಕಿಸಿದ್ದಾರೆ.
ಸಾಮಾಜಿಕ ಮತ್ತು ರಾಜಕೀಯ ಜ್ಞಾನ ಉಳ್ಳ ಯಾವುದೇ ವ್ಯಕ್ತಿ ಚುನಾವಣಾ ತಂತ್ರಜ್ಞ ಆಗಬಹುದು, ಆದರೆ ಅವರು ದೇಶದ ಜನರ ಸಮಸ್ಯೆಗಳ ಪರವಾಗಿ ಮತ್ತು ಮೂಲಭೂತವಾದಿಗಳ ವಿರುದ್ಧ ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಓರ್ವ ಅವಕಾಶವಾದಿ ಮನಸ್ಥಿತಿಯ ಪ್ರಶಾಂತ್ ಕಿಶೋರ್ ಅಂತಹವರೇ ಸಾಕ್ಷಿ!
— Dr H.C.Mahadevappa (@CMahadevappa) December 3, 2021
ಜನಪರವಾಗಿಲ್ಲದ ಬೊಗಳೆ ಮಾತುಗಳಿಂದ ಜನರಿಗೇನು ಪ್ರಯೋಜನ?







