ಯಂತ್ರದಲ್ಲಿ ತಾಂತ್ರಿಕ ದೋಷ : ಸ್ಪಂದಿಸದ ಕಂಪೆನಿಯ ವಿರುದ್ಧ ಮಂಗಳೂರು ಗ್ರಾಹಕ ನ್ಯಾಯಾಲಯ ತೀರ್ಪು

ಮಂಗಳೂರು: ಯಂತ್ರವೊಂದನ್ನು ಖರೀದಿಸಿದ ಗ್ರಾಹಕರಿಗೆ ಅದರಲ್ಲಿ ತೊಂದರೆ ಉಂಟಾದಾಗ ಸ್ಪಂದಿಸದ ವಿತರಕ ಹಾಗು ತಯಾರಿಕಾ ಸಂಸ್ಥೆಗೆ ಯಂತ್ರದ ಒಟ್ಟು ವೆಚ್ಚ 6,19,500 ರೂ.ನ್ನು ಶೇ.7 ಬಡ್ಡಿ ಸಹಿತ ಹಿಂತಿರುಗಿಸುವಂತೆ ಗ್ರಾಹಕರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಬಂಟ್ವಾಳದ ಮೊಡಂಕಾಪಿನ ಕಲ್ಪವೃಕ್ಷ ಟ್ರೇಡರ್ಸ್‌ನ ಮಾಲಕ ಸುಂದರ ಕುಲಾಲ್ ಉಡುಪಿ ವಿನಿಟೆಕ್ ಸಿಸ್ಟಮ್ಸ್ ಅವರಿಂದ ಎಸ್ಸೆ ಕಂಪೆನಿ ಬೆಂಗಳೂರು ಇವರಿಂದ ತಯಾರಿಸಲ್ಪಟ್ಟ ತೂಕದ ಯಂತ್ರವನ್ನು ಖರೀದಿಸಿದ್ದರು. ತೂಕದ ಯಂತ್ರದಲ್ಲಿ ತಯಾರಿಕೆಯ ನಂತರದಲ್ಲಿ ಆದ ತೊಂದರೆಗಳ ಬಗ್ಗೆ ಸುಂದರ ಕುಲಾಲ್ ಅವರು ಕಂಪೆನಿಗೆ ಮತ್ತು ವಿತರಕರಿಗೆ ನೋಟಿಸು ನೀಡಿ ಪರಿಹಾರ ನೀಡುವಂತೆ ಕೇಳಿದ್ದರು. ಈ ಬಗ್ಗೆ ಆಸಕ್ತಿ ವಹಿಸದ ವಿತರಕರು ಮತ್ತು ಯಂತ್ರ ತಯಾರಿಕ ಸಂಸ್ಥೆಯ ವಿರುದ್ಧ ಸುಂದರ ಕುಲಾಲ್ ಮಂಗಳೂರಿನ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ತನಿಖೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು ವಿತರಕ ಸಂಸ್ಥೆ ಮತ್ತು ತಯಾರಿಕಾ ಸಂಸ್ಥೆಯವರು ಗ್ರಾಹಕ ಸುಂದರ ಕುಲಾಲ್‌ರಿಗೆ ಯಂತ್ರದ ಒಟ್ಟು ವೆಚ್ಚ 6,19,500 ರೂ.ನ್ನು ಶೇ.7 ಬಡ್ಡಿ ಸಹಿತ ಹಿಂತಿರುಗಿಸಬೇಕು. ನ್ಯಾಯಾಲಯದ ವೆಚ್ಚ 5 ಸಾವಿರ ರೂ. ಹಾಗು ಪರಿಹಾರ ಮೊತ್ತ 10 ಸಾವಿರ ರೂ. ನೀಡಬೇಕು ಎಂದು ಆದೇಶಿಸಿದೆ. ಗ್ರಾಹಕರ ಪರವಾಗಿ ವಿಟ್ಲದ ವಕೀಲ ಮೋಹನ್ ಎ.ವಾದಿಸಿದ್ದರು.





