ಸಂಸದ ತೇಜಸ್ವಿ ಸೂರ್ಯರ ಒಣಜಂಭ ನ್ಯಾಯಸಮ್ಮತವಲ್ಲ: ಡಾ. ಶಂಕರ್ ಗುಹಾ ಆರೋಪ
ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ
ಬೆಂಗಳೂರು, ಡಿ.3: ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚನೆಗೊಳಗಾದ ಠೇವಣಿದಾರರಿಗೆ ಡಿಐಸಿಜಿಸಿ ಅಡಿ 5 ಲಕ್ಷ ರೂ. ಬಿಡುಗಡೆಯಾಗಿದೆ. ಈ ಹಣವನ್ನು ಸಂಸದ ತೇಜಸ್ವಿ ಸೂರ್ಯ ತಾವೇ ಬಿಡುಗಡೆಗೊಳಿಸಿದ್ದಾರೆ ಎಂದು ಒಣಜಂಭ ಕೊಚ್ಚಿಕೊಳ್ಳುತ್ತಿರುವುದು ನ್ಯಾಯಸಮ್ಮತವಲ್ಲ ಎಂದು ಠೇವಣಿದಾರರ ಹಿತರಕ್ಷಣಾ ವೇದಿಕೆಯ ವಕ್ತಾರ ಡಾ. ಶಂಕರ್ ಗುಹಾ ಆರೋಪಿಸಿದ್ದಾರೆ.
ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಕೆಲ ಗ್ರಾಹಕರಿಗೆ ಡಿಐಸಿಜಿಸಿ (ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್) ಅಡಿ ತಲಾ 5ಲಕ್ಷ ರೂ. ಹಣ ಪರಿಹಾರವಾಗಿ ಬಿಡುಗಡೆಯಾಗಿದೆ. ವಿಪರ್ಯಾಸವೆಂದರೆ ಠೇವಣಿದಾರರಿಗೆ ಪರಿಹಾರವನ್ನು ತಾವೇ ಕೊಡಿಸಿದ್ದೇವೆ ಎಂದು ಹೇಳಿಕೊಂಡು ತೇಜಸ್ವಿ ಸೂರ್ಯ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಒಂದು ವೇಳೆ ಅವರೆ ಕೊಡಿಸಿದ್ದರೆ, ನೊಂದ ಠೇವಣಿದಾರರಿಗೆ ಪರಿಹಾರ ಕೊಡಿಸಲು ಎರಡು ವರ್ಷಗಳಷ್ಟು ಸಮಯಬೇಕೆ? ಹಾಗಾದರೆ 5 ಲಕ್ಷಕ್ಕಿಂತ ಹೆಚ್ಚು ಹಣ ಠೇವಣಿ ಇಟ್ಟಿರುವ ಸುಮಾರು 10ರಿಂದ 11 ಸಾವಿರ ಗ್ರಾಹಕರಿಗೆ ಯಾವ ರೀತಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ತಕ್ಷಣವೇ ಅವರ ಹಣ ಬಡ್ಡಿ ಸಮೇತ ಕೊಡಿಸುವ ಕೆಲಸ ಏಕೆ ಮಾಡಬಾರದು ಎಂದು ಅವರು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಯೆಸ್ ಬ್ಯಾಂಕ್, ಲಕ್ಷ್ಮಿ ವಿಲಾಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗಳ ವಿಚಾರದಲ್ಲಿ ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಯಿತು. ಪಿಎಂಸಿ ಪ್ರಕರಣದಲ್ಲೂ ಒಂದು ವರ್ಷದ ಒಳಗೆ ಪರಿಹಾರ ಸಿಕ್ಕಿತು. ಆದರೆ ಗುರುರಾಘವೇಂದ್ರ ಬ್ಯಾಂಕ್ ಎರಡು ವರ್ಷಗಳಾದರೂ ಸಮಸ್ಯೆ ಬಗೆಹರಿಯದೆ ಉಳಿದಿದೆ ಎಂದ ಅವರು, ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ ಅವರು ಠೇವಣಿದಾರರಿಗೆ ಡಿಐಸಿಜಿಸಿ ಹಣ ಸಿಗಲು ತಾವೇ ಕಾರಣ ಎಂದು ಹೇಳುವ ಮೂಲಕ ಜನತೆಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ. ಆದುದರಿಂದ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದರು.
ಸೂರ್ಯ ಸಾಧನೆ ಶೂನ್ಯ
ದೇಶದ ಎಲ್ಲಾ ಬ್ಯಾಂಕ್‍ಗಳು ವಿಮೆಯನ್ನು ಗ್ರಾಹಕರ ಹಣದಿಂದಲೇ ಕಟ್ಟುತ್ತಿದ್ದು, ಈವರೆಗೂ 1.35 ಲಕ್ಷ ಕೋಟಿ ಹಣ ಡಿಐಸಿಜಿಸಿ ಸಂಸ್ಥೆಯಲ್ಲಿರುತ್ತದೆ. ಬ್ಯಾಂಕಿನ ಹಗರಣ ಬೆಳಕಿಗೆ ಬಂದ ಎರಡು ವರ್ಷಗಳ ಬಳಿಕ ಡಿಐಸಿಜಿಸಿ ಹಣ ಪರಿಹಾರವಾಗಿ ಗ್ರಾಹಕರಿಗೆ ನೀಡಲಾಗಿದೆ. ಇದರಲ್ಲಿ ಸಂಸದ ತೇಜಸ್ವಿ ಸೂರ್ಯರ ಸಾಧನೆ ಏನು ಇಲ್ಲ. ಈ ಎರಡು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಜನ ಠೇವಣಿದಾರರು ಸಾವನ್ನಪ್ಪಿದ್ದಾರೆ. ಉಳಿದವರು ನಿತ್ಯ ಜೀವನ ಮಾಡಲು ಬೇರೆ ದಾರಿಯಿಲ್ಲದೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಸಂಸದರು ಇದಕ್ಕೆ ಪರಿಹಾರವನ್ನು ಒದಗಿಸಲಿ.
-ಡಾ. ಶಂಕರ್ ಗುಹಾ, ವಕ್ತಾರ, ಠೇವಣಿದಾರರ ಹಿತರಕ್ಷಣಾ ವೇದಿಕೆ







