ಕನ್ನಡದಲ್ಲಿ ಅರೇ ವೈದ್ಯಕೀಯ ಕೋರ್ಸ್ ಪ್ರಾರಂಭ: ಆರೋಗ್ಯ ವಿವಿ ಕುಲಸಚಿವ ಎನ್.ಎಂ.ನಾಗರಾಜ್

ಬೆಂಗಳೂರು, ಡಿ. 3: ‘ರಾಜ್ಯದಲ್ಲಿ ನರ್ಸ್‍ಗಳ ಕೊರತೆ ನೀಗಿಸಲು ಇದೇ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿಯೇ ಅರೇ ವೈದ್ಯಕೀಯ ಕೋರ್ಸ್‍ಗಳನ್ನು ಪ್ರಾರಂಭಿಸಲಾಗುವುದು' ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಎನ್.ಎಂ.ನಾಗರಾಜ್ ತಿಳಿಸಿದರು.
ಶುಕ್ರವಾರ ವಿಧಾಸಸೌಧದ ನಾಲ್ಕನೆ ಮಹಡಿಯಲ್ಲಿನ ಕೊಠಡಿ ಸಂಖ್ಯೆ 419ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಹಮ್ಮಿಕೊಂಡಿದ್ದ ವೈದ್ಯಕೀಯ ವಲಯದಲ್ಲಿ ಕನ್ನಡ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಅನ್ಯ ರಾಜ್ಯದವರು ಕನ್ನಡ ನಾಡಿನಲ್ಲಿ ಹೆಚ್ಚಾಗಿ ನಸಿರ್ಂಗ್ ಕೋರ್ಸ್‍ಗಳನ್ನು ಕಲಿಯುತ್ತಾರೆ. ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯೆ ಕಲಿತ ಅವರು ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಾರೆ. ಇದರಿಂದಾಗಿ ರಾಜ್ಯದಲ್ಲಿ ಶುಶ್ರೂಷಕರ ಕೊರತೆಯಾಗುತ್ತದೆ. ಹೀಗಾಗಿ ಕನ್ನಡದಲ್ಲಿ ಅರೆ ವೈದ್ಯಕೀಯ ಪ್ರಾರಂಭಿಸುವುದರ ಕುರಿತು ಯೋಚಿಸಲಾಗಿದೆ' ಎಂದು ತಿಳಿಸಿದರು.
‘ವೈದ್ಯಕೀಯ ವಲಯದಲ್ಲಿ ಡಿಪ್ಲೊಮಾ ಮಟ್ಟದಲ್ಲಿಯಾದರೂ ಕನ್ನಡದಲ್ಲಿ ಶಿಕ್ಷಣ ನೀಡುವ ಸಾಧ್ಯತೆಗಳ ಕುರಿತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಅವಲೋಕಿಸುತ್ತಿದೆ. ಅಲ್ಲದೆ, ವೈದ್ಯರು ಮತ್ತು ರೋಗಿಗಳ ನಡುವೆ ಸಂವಹನ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ವೈದ್ಯರು ಕರ್ತವ್ಯ ನಿರ್ವಹಿಸುವ ಜಾಗದಲ್ಲಿ ಹೆಚ್ಚು ಜನರು ಬಳಸುವ ಭಾಷೆಯಲ್ಲಿ ಸಂವಹನ ನಡೆಸಿದರೆ ರೋಗಿ ಮತ್ತು ವೈದ್ಯರ ನಡುವೆ ಉತ್ತಮ ಬಾಂಧವ್ಯ ಬೆಳೆಯಲಿದೆ. ಎಲ್ಲ ರೀತಿಯಲ್ಲೂ ಸುಲಲಿತವಾದ ಕನ್ನಡ ಭಾಷೆಯ ವೈದ್ಯಕೀಯ ಶಿಕ್ಷಣ ಲಭಿಸಿದರೆ ವೈದ್ಯರು ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೇ ಸಂವಹನ ನಡೆಸಲಿದ್ದಾರೆ' ಎಂದು ಅವರು ತಿಳಿಸಿದರು.
‘ಈ ಹಿಂದೆ ಡಾ.ಅನುಪಮಾ ನಿರಂಜನ, ಡಾ.ಸಿ.ಆರ್.ಚಂದ್ರಶೇಖರ್ ಸೇರಿದಂತೆ ಹಲವು ಮಂದಿ ಕನ್ನಡದಲ್ಲಿ ವೈದ್ಯಕೀಯಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. ಈ ಕೆಲಸ ಇಂದಿನ ದಿನಗಳಲ್ಲಿ ಹೆಚ್ಚಾಗಬೇಕು. ಆ ಮೂಲಕ ವೈದ್ಯಕೀಯದಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಕೆ ಮಾಡುವ ಅಗತ್ಯವಿದೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು.
ಕಿದ್ವಾಯಿ ಸ್ಮಾರಕ ಗ್ರಂಥಿಯ ನಿವೃತ್ತ ನಿರ್ದೇಶಕಿ ಡಾ.ವಿಜಯಲಕ್ಷ್ಮೀ ದೇಶಮಾನೆ ಮಾತನಾಡಿ, ಎರಡು ವರ್ಷಗಳ ಕಾಲ ಕೋವಿಡ್ ನಮ್ಮ ಲಕ್ಷ್ಯವನ್ನು ತಿಂದು ಹಾಕಿತ್ತು. ಈಗ ಕೋವಿಡ್ ನಂತರದ ಕಷ್ಟಗಳನ್ನು ಎದುರಿಸುತ್ತಿದ್ದೇವೆ. ವೈದ್ಯರನ್ನು ಸೇರಿದಂತೆ ನಮ್ಮ ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಿರಲಿಲ್ಲ. ಆದರೆ, ಕೋವಿಡ್ ಎಲ್ಲರಿಗೂ ಆರೋಗ್ಯ ಎಷ್ಟು ಮಹತ್ವದ್ದು ಎಂದು ತಿಳಿಸಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವೈದ್ಯರು ಒತ್ತಾಯ ಮಾಡಬಾರದು. ರೋಗಿಗಳಿಗೆ ಅರ್ಥವಾಗುವಂತೆ ಮತ್ತು ಅವರಿಗೆ ಪೂರಕವಾಗುವ ರೀತಿಯಲ್ಲಿ ವೈದ್ಯರು ಚಿಕಿತ್ಸೆ ನೀಡಿದರೆ ಯಶಸ್ವಿಯಾಗಲಿದೆ ಎಂದು ನುಡಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ರೋಗಿಗೆ ಸಂಬಂಧವಿಲ್ಲದ ಭಾμÉಯಲ್ಲಿ ವೈದ್ಯರು ಸಂಭಾಷಣೆ ನಡೆಸಿದರೆ ಆತ ಅತಂತ್ರವಾಗಿ ಮಾನಸಿಕವಾಗಿ ಕುಗ್ಗುತ್ತಾನೆ. ಇದು ಆತನ ಮನೋಬಲವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ವೈದ್ಯರು ರೋಗಿಗೆ ಅರ್ಥವಾಗುವ ಭಾಷೆಯಲ್ಲಿ ಸಂವಹನ ನಡೆಸಬೇಕು ಎಂದು ಹೇಳಿದರು.
ಕೊರಿಯಾದಂತಹ ಸಣ್ಣ ದೇಶ ಅದರ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಸಾಧ್ಯವಾದರೆ ಕರ್ನಾಟಕದಲ್ಲಿ ಇದು ಯಾಕೆ ಸಾಧ್ಯವಿಲ್ಲ ಎಂದು ಆಲೋಚಿಸ ಬೇಕಾಗುತ್ತದೆ. ನಮ್ಮ ಭಾಷೆಯಲ್ಲಿ ನಾವು ಶಿಕ್ಷಣ ಪಡೆದುಕೊಳ್ಳುವುದರ ಮೂಲಕ ನಮ್ಮತನವನ್ನು ಕಾಪಾಡಿಕೊಳ್ಳಬೇಕು ಎಂದರು. ಕಾರ್ಯಾಗಾರದಲ್ಲಿ ಕಲಾವಿದ ಸುಚೇಂದ್ರ ಪ್ರಸಾದ್, ಎಂ.ಎಸ್.ರಾಮಯ್ಯ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಸೋಮಶೇಖರ್ ಎ.ಆರ್., ಪ್ರಾಧಿಕಾರದ ಸದಸ್ಯ ಡಾ.ಸಿ.ಎ.ಕಿಶೋರ್, ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು.
.jpg)







